
ಬೆಂಗಳೂರು: ನಗರದ ಹರಳೂರು ಗ್ರಾಮದಲ್ಲಿರುವ ಐಷಾರಾಮಿ ವಸತಿ ಸಮುಚ್ಚಯದಲ್ಲಿ 266 ಅಪಾರ್ಟ್ ಮೆಂಟ್ ಖರೀದಿದಾರರ ಭವಿಷ್ಯ ಅತಂತ್ರವಾಗಿದೆ. ವರ್ತೂರು ಹೋಬಳಿಯ ‘ಫ್ರಾಂಟಿಯರ್ ಹೈಟ್ಸ್’ನಲ್ಲಿನ ಫ್ಲಾಟ್‌ಗಳಲ್ಲಿ ಹೂಡಿಕೆ ಮಾಡಿರುವ ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಬಿಲ್ಡರ್ ಪ್ರಾಜೆಕ್ಟ್ ನ್ನು ಪೂರ್ಣಗೊಳಿಸಿಲ್ಲ, ಕಳೆದ ಒಂದು ವರ್ಷದ ಹಿಂದೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (k-RERA) ಹೊರಡಿಸಿದ ಆದೇಶಕ್ಕೆ ಬದ್ಧವಾಗಿಲ್ಲ.
120 ಕೋಟಿ ರೂಪಾಯಿಗಳ ಈ ಯೋಜನೆಯು 15 ಮಹಡಿಗಳನ್ನು (ಜೊತೆಗೆ ನೆಲಮಹಡಿ) ಐದು ಬ್ಲಾಕ್‌ಗಳನ್ನು ಹೊಂದಿದೆ. ಡೆವಲಪರ್, ಫ್ರಾಂಟಿಯರ್ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಕೋರಮಂಗಲದಲ್ಲಿದೆ. ಅದೇ ಪ್ರದೇಶದಲ್ಲಿ ವಾಸವಾಗಿರುವ ಮಾಲೀಕ ಆನಂದರೆಡ್ಡಿ ಫೋನ್ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಮನೆ ಖರೀದಿದಾರರು ಅವರ ನಿವಾಸದ ಹೊರಗೆ ಪದೇ ಪದೇ ಪ್ರತಿಭಟನೆ ನಡೆಸುತ್ತಾ ಅಸಹಾಯಕತೆ ತೋರಿಸುತ್ತಿದ್ದಾರೆ.
ಕೆ-ಆರ್‌ಇಆರ್‌ಎ, ಗ್ರಾಹಕ ನ್ಯಾಯಾಲಯ ಮತ್ತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಆದರೆ ಸಮಸ್ಯೆಗೆ ಪರಿಹಾರದ ಭರವಸೆಯಿಲ್ಲ. ಹತಾಶ ಮಾಲೀಕರಲ್ಲಿ ಒಬ್ಬರಾದ ಹಿಮಿಕಾ ದಾಸ್ ಮತ್ತು ಅವರ ಪತಿ ಹಿಮಾಂಶು ಲಹ್ಕರ್, ''ನಾವು 3ಬಿಹೆಚ್ ಕೆ ಅಪಾರ್ಟ್‌ಮೆಂಟ್ ನ್ನು ಖರೀದಿಸಲು ಏಪ್ರಿಲ್ 2018 ರಲ್ಲಿ ಸುಮಾರು 1 ಕೋಟಿ ರೂಪಾಯಿಗಳ ಸಂಪೂರ್ಣ ಪಾವತಿಯನ್ನು ಮಾಡಿದ್ದೇವೆ, ಜೂನ್ 2019 ರೊಳಗೆ ಹಸ್ತಾಂತರಕ್ಕೆ ಭರವಸೆ ನೀಡಿದ್ದರು. ಆರಂಭದಲ್ಲಿ, ಕೋವಿಡ್ ಮತ್ತು ಕಾರ್ಮಿಕರ ಕೊರತೆಯಿಂದ ಪ್ರಾಜೆಕ್ಟ್ ಪೂರ್ಣಗೊಳಿಸಲು ಆಗುತ್ತಿಲ್ಲ ಎಂದು ಕಾರಣಗಳನ್ನು ನೀಡುತ್ತಾ ತಳ್ಳುತ್ತಾ ಹೋದರು. ಈಗ 2024 ರ ಅಂತ್ಯವಾಗಿದೆ ಆದರೆ ಇನ್ನೂ ನಮಗೆ ಮನೆ ಸಿಕ್ಕಿಲ್ಲ ಎನ್ನುತ್ತಾರೆ.
ಸದಾನಂದ ಭಟ್ ಎಂಬುವವರು 75 ಲಕ್ಷ ರೂಪಾಯಿ ಪಾವತಿಸಿ 3ಬಿಹೆಚ್ ಕೆ ಅಪಾರ್ಟ್ ಮೆಂಟ್ ಖರೀದಿಸಿದ್ದರು. 2017ರಲ್ಲಿ ಖರೀದಿಸಿದ್ದೆ. ಇಲ್ಲಿಯವರೆಗೆ, ನಾನು 69 ಲಕ್ಷದವರೆಗೆ ಪಾವತಿಸಿದ್ದೇನೆ. ಆರಂಭದಲ್ಲಿ, ಇದನ್ನು ಗ್ರೌಂಡ್-ಪ್ಲಸ್ -11 ರಚನೆಯಾಗಿ ಯೋಜಿಸಲಾಗಿತ್ತು, ನಂತರ ಅದನ್ನು 15 ಮಹಡಿಗಳಾಗಿ ಮಾಡಲು ಯೋಜನೆಯನ್ನು ಮಾರ್ಪಡಿಸಲಾಯಿತು, ಆದರೆ ಇದುವರೆಗೆ ಮನೆ ನನ್ನ ಕೈ ಸೇರಿಲ್ಲ.
ಹಸ್ತಾಂತರದಲ್ಲಿ ಭಾರೀ ವಿಳಂಬದಿಂದಾಗಿ, 40 ಮಾಲೀಕರು ಪ್ರತ್ಯೇಕವಾಗಿ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೇಳಿದರು.
ಫ್ಲಾಟ್ ಖರೀದಿಸಲು ಸದಾನಂದ ಭಟ್ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರು. ನಾನು ನನ್ನ ಇಎಂಐಯನ್ನು ನಿಯಮಿತವಾಗಿ ಪಾವತಿಸುತ್ತಿದ್ದೇನೆ. ಇದಲ್ಲದೇ ನಾನು ಸದ್ಯ ವಾಸವಾಗಿರುವ ಮನೆಗೆ ಬಾಡಿಗೆ ನೀಡುತ್ತಿದ್ದೇನೆ. ಇದರಿಂದ ಭಾರಿ ಆರ್ಥಿಕ ಹೊರೆಯಾಗುತ್ತಿದೆ ಎಂದರು.
ಇನ್ನೂ ಅನೇಕರ ಸ್ಥಿತಿ ಇನ್ನೂ ದುಸ್ತರವಾಗಿದೆ ಎಂದರು. ಬಿಲ್ಡರ್ ತಮ್ಮ ಪೂರ್ವ ಇಎಂಐ ಬಡ್ಡಿ ಶುಲ್ಕವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು. ಅವರನ್ನು ನಂಬಿ, ಅನೇಕರು ಸಬ್‌ವೆನ್ಶನ್ ಯೋಜನೆಯಡಿ ಬ್ಯಾಂಕ್‌ನಿಂದ ಸಾಲ ಪಡೆದು ತಮ್ಮ ಮನೆಗಳಿಗೆ ನೀಡಿದ್ದಾರೆ. ಕೆಲವು ಸಮಯದವರೆಗೆ, ಬಿಲ್ಡರ್ ಬಡ್ಡಿಯನ್ನು ಪಾವತಿಸಿ ನಂತರ ನಿಲ್ಲಿಸಿದ್ದಾರೆ. ಈಗ ಯಾವುದೇ ಇಎಂಐ ಮೊತ್ತವನ್ನು ಪಾವತಿಸದೆ ಬಡ್ಡಿಯನ್ನು ಪಾವತಿಸುತ್ತಿದ್ದಾರೆ. ಯೋಜನೆಯನ್ನು ಸಾಮಾನ್ಯ ಗೃಹ ಸಾಲವಾಗಿ ಪರಿವರ್ತಿಸಲು ಬ್ಯಾಂಕುಗಳು ನಿರಾಕರಿಸುತ್ತವೆ ಎಂದು ಸಮಸ್ಯೆಯನ್ನು ತೋಡಿಕೊಂಡರು.
ಅಕ್ಟೋಬರ್ 1, 2019 ರಂದು ತಮಗೆ ಫ್ಲಾಟ್ ಸಿಗುತ್ತದೆ ಎಂದು ಭರವಸೆಯಿಂದ ಹಣ ನೀಡಿ ಸಮಸ್ಯೆಗೆ ಸಿಲುಕಿರುವ ಆಶಿಶ್ ಕುಮಾರ್ ಪಾಂಡೆ ಮತ್ತು ನೀತಿ ಮಿಶ್ರಾ ಅವರು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 15, 2023 ರಂದು ನೀಡಲಾದ ರೇರಾ ತೀರ್ಪಿನ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿದೆ. ನ್ಯಾಯಾಲಯವು 69.41 ಲಕ್ಷ ರೂಪಾಯಿಗಳನ್ನು ಬಡ್ಡಿಯಾಗಿ ಮೇ 21, 2023 ರವರೆಗಿನ ವಿಳಂಬದ ಅವಧಿಯ ಬಡ್ಡಿದರವೆಂದು ಪಾವತಿಸುವಂತೆ ಕೇಳಿಕೊಂಡಿದೆ. 60 ದಿನಗಳ ಒಳಗೆ ಪಾವತಿಸಿ ಹಸ್ತಾಂತರಿಸಲು ನಿರ್ದೇಶಿಸಿದರೂ ಬಿಲ್ಡರ್ ನಿರ್ಲಕ್ಷಿಸಿದ್ದಾರೆ.
ಖರೀದಿದಾರರಿಗೆ ಸಂಪರ್ಕ ಬಿಂದುವಾಗಿದ್ದ ಫ್ರಾಂಟಿಯರ್ ಶೆಲ್ಟರ್ಸ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಅರ್ನಾಬ್, TNIE ಜೊತೆ ಮಾತನಾಡಿ, ನನಗೂ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದರು. ಪದೇ ಪದೇ ಕರೆಗಳು ಮತ್ತು ಸಂದೇಶಗಳನ್ನು ಕಳುಹಿಸಿದರೂ ಪ್ರತಿಕ್ರಿಯೆಗೆ ಮಾಲೀಕ ಆನಂದರೆಡ್ಡಿ ಸಂಪರ್ಕಕ್ಕೆ ಬರಲಿಲ್ಲ.
Advertisement