ಪಾಸ್ ಪೋರ್ಟ್ ತ್ವರಿತ ಯೋಜನೆ ಹರಿಕಾರ ಎಸ್.ಎಂ ಕೃಷ್ಣ
ಎಸ್.ಎಂ.ಕೃಷ್ಣ ಅವರ ಸೇವೆ ರಾಜ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ದೇಶಕ್ಕೂ ಅಪಾರ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಲ್ಲದೇ ಕೇಂದ್ರ ಸಚಿವರಾಗಿಯೂ ದೇಶಕ್ಕೆ ತಮ್ಮದೆಯಾದ ಉಡುಗೊರೆ ನೀಡಿದ್ದಾರೆ. 72ನೇ ವಿದೇಶಾಂಗ ಸಚಿವರಾಗಿ ಎಸ್ಎಂ ಕೃಷ್ಣ ದೊಡ್ಡ, ದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ.
2009 ರಿಂದ 2012 ರವರೆಗೆ ಮನಮೋಹನ ಸಿಂಗ್ ಸರ್ಕಾರದ ಅವಧಿಯಲ್ಲಿ ಎಸ್ಎಂ ಕೃಷ್ಣ ಅವರು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅಧಿಕಾರದ ಅವಧಿಯಲ್ಲಿ ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ, ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಸ್ನೇಹಮಯಿಯಾಗಿ ಕೊಂಡೊಯ್ಯಲು ಪ್ರಯತ್ನಿಸಿದ್ದರು. ದ್ವಿಪಕ್ಷೀಯ ಸಂಬಂಧ ಸೇರಿದಂತೆ ಜಾಗತಿಕ ವಿಷಯವಾಗಿ ಹಲವು ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.
ಚೀನಾ, ಬ್ರಿಟನ್, ರಷ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕ, ಇಂಗ್ಲೆಂಡ್ ದೇಶಗಳ ಜತೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದರು. ಕೃಷ್ಣ ಅವರ ಕಾಲದಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧ ಮತ್ತಷ್ಟು ವೃದ್ಧಿಯಾಗಿತ್ತು.
ವಿಶ್ವಸಂಸ್ಥೆ ವಿಚಾರಕ್ಕೆ ಬರುವುದಾದರೆ.. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಬೇಕು ಎಂದು ಸಮರ್ಥವಾಗಿ ಪ್ರತಿಪಾದಿಸಿದವರಲ್ಲಿ ಎಸ್.ಎಂ.ಕೃಷ್ಣ ಪ್ರಮುಖರು. ಎಲ್ಲಾ ದೇಶಗಳಂತೆ ಭಾರತ ಸಮರ್ಥವಾದ ದೇಶ. ನಮಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಬೇಕು. ಅದಕ್ಕೆ ಬೇಕಾದ ಅರ್ಹತೆ ನಮಗಿದೆ ಎಂದು ಪ್ರತಿಪಾದಿಸಿದ್ದರು. 100ಕ್ಕೂ ಹೆಚ್ಚು ರಾಷ್ಟ್ರಗಳ ವಿದೇಶಾಂಗ ಸಚಿವರಿಗೆ ದೂರವಾಮಿ ಕರೆ ಮಾಡಿ, ವೈಯಕ್ತಿಕವಾಗಿ ಭೇಟಿ ಮಾಡಿ ಭಾರತ ಪರ ಮತ ಚಲಾಯಿಸುವಂತೆ ಮನವೊಲಿಸಿದ್ದರು. ಇದರ ಪರಿಣಾಮ 192ರ ಪೈಕಿ 187 ಮತ ಪಡೆದು ಭಾರತ ಯುಎನ್ಎಸ್'ಸಿಯಲ್ಲಿ ಖಾಯಂ ಸ್ಥಾನ ಗಳಿಸಿತ್ತು. ಇದಲ್ಲದೆ, ಪಾಕಿಸ್ತಾನ, ಚೀನಾ ಜತೆ ಬಾಂಧವ್ಯ ವೃದ್ಧಿಗಾಗಿ ಎಸ್ಎಂ.ಕೃಷ್ಣ ಸಾಕಷ್ಟು ಪ್ರಯತ್ನಪಟ್ಟಿದ್ದರು.
ಯುಪಿಎ ಅಧಿಕಾರಾವಧಿಯಲ್ಲಿ ಪಾಸ್‌ಪೋರ್ಟ್ ಪಡೆದುಕೊಳ್ಳುವ ಪ್ರಕ್ರಿಯೆ ಸುಲಭ ಇರಲಿಲ್ಲ. ಅದನ್ನು ಸರಳೀಕರಿಸಿದ ಕೀರ್ತಿ ಎಸ್ಎಂ ಕೃಷ್ಣ ಅವರಿಗೆ ಸಲ್ಲುತ್ತದೆ. ಪಾಸ್‌ಪೋರ್ಟ್ ನೀತಿಯಲ್ಲಿ ಅಮೂಲಾಗ್ರಹ ಬದಲಾವಣೆ ತಂದು, ಆಧುನೀಕರಣಗೊಳಿಸಿದರು.
ವಿಶೇಷ ಅಂದರೆ ದೇಶದ ವಿವಿಧ ಕಡೆ ಸುಮಾರು 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆದರು. ಪಾಸ್‌ಪೋರ್ಟ್ ನೀಡಿಕೆಯಲ್ಲಿ ವಿಳಂಬವಾಗದಂತೆ ಪರಿಹಾರ ಕಂಡುಕೊಳ್ಳಲು ಇ-ಗವರ್ನೆನ್ಸ್ ಕಾರ್ಯಕ್ರಮ ಜಾರಿಗೆ ತಂದರು. ಇದರಿಂದ ಕೋಟ್ಯಾಂತರ ಭಾರತೀಯರಿಗೆ ಸಾಕಷ್ಟು ಅನುಕೂಲವಾಯಿತು. ಕೃಷ್ಣ ಅವರು ವಿದೇಶಾಂಗ ಮಂತ್ರಿ ಆಗಿದ್ದಾಗಲೇ ಅಂದರೆ 2011ರಲ್ಲಿ ಲಿಬಿಯಾ ಕ್ರಾಂತಿ ಉಂಟಾಗಿತ್ತು.
ಆ ಸಂದರ್ಭದಲ್ಲಿ ಸುಮಾರು 18 ಸಾವಿರ ಭಾರತೀಯರು ಅಪಾಯಕ್ಕೆ ಸಿಲುಕಿದ್ದರು. ಆಗ ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಕೃಷ್ಣ ಮಹತ್ವದ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೇ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿ 4 ವರ್ಷ ಸೇವೆ ಸಲ್ಲಿಸಿದ್ದರು. ಆ ಮೂಲಕ ಎಸ್ಎಂಕೆ ಇಡೀ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.