
ಬೆಂಗಳೂರು: ಮಹಿಳೆಯರ ಸುರಕ್ಷತೆ ಖಾತ್ರಿಪಡಿಸುವ ಉದ್ದೇಶದಿಂದ ರಾಜ್ಯದಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದ ಇಬ್ಬರು ಕಾರ್ಯಕರ್ತರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಮೃತರನ್ನು ಮೃತರನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡ (49) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಕುಂಜಿ (45) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಎಂಡಿ ನೌಫುಲ್ (33), ಹಂಸ (33), ಬಾಲಕೃಷ್ಣ (45), ಪ್ರವೀಣ್ ಪಿರೇರಾ (40) ಎಂದು ಗುರ್ತಿಸಲಾಗಿದೆ.
6 ಮಂದಿ ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಭೇಟಿಯಾಗಿ ಮನವಿ ಪತ್ರ ನೀಡಲು ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.
ಮಂಗಳೂರಿನಿಂದ ದೆಹಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ 6 ಮಂದಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಟ್ರಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಬುಧವಾರ 55ನೇ ದಿನದ ಪಾದಯಾತ್ರೆ ಗುಜರಾತಿನ ಭರೂಚ್ ಎನ್ನುವ ನಗರ ತಲುಪಿತ್ತು. ಈ ವೇಳೆ ಹೆದ್ದಾರಿ ಬದಿಯಲ್ಲಿ ನಿಂತು ವಿಶ್ರಾಂತಿ ಪಡೆಯತ್ತಿರುವಾಗ ಟ್ರಕ್ ಒಂದು ಇವರು ಕುಳಿತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲವೇ ಸಾವನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿದೆ.
ಘಟನೆ ಬಳಿಕ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಘಟನೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಆಘಾತ ವ್ಯಕ್ತಪಡಿಸಿದ್ದು, ಗುಜರಾತ್‌ಗೆ ಭೇಟಿ ನೀಡಿ, ಸ್ಥಳೀಯ ಪೊಲೀಸ್ ಸೂಪರಿಂಟೆಂಡೆಂಟ್ ಮತ್ತು ಇತರ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಮಹಿಳಾ ಹಕ್ಕುಗಳಿಗಾಗಿ ಹೋರಾಡುವ ಅಚಲ ಸಂಕಲ್ಪದೊಂದಿಗೆ ಕರ್ನಾಟಕದಿಂದ ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದರು. ಗುಜರಾತ್ ನಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿ ಮಾಡಿದ್ದರು ಎಂದು ಹೇಳಿದ್ದಾರೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ --ಪಿಯುಸಿಎಲ್ ನ ಕವಿತಾ ಶ್ರೀವಾಸ್ತವ ಅವರು ಅವರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಬೇಕು ಮತ್ತು ಗಾಯಗೊಂಡ ಕಾರ್ಯಕರ್ತರಿಗೆ ಅಗತ್ಯ ಸೌಲಭ್ಯಗಳ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಮೂಸಾ ಶರೀಫ್ ಕುಂಜಿ ಮತ್ತು ಎಸ್.ಎಚ್.ಲಿಂಗೇಗೌಡರ ಸಾವು ಅವರ ಧ್ವನಿಯನ್ನು ಮೌನಗೊಳಿಸಿರಬಹುದು, ಆದರೆ. ಮಹಿಳೆಯರ ಸುರಕ್ಷತೆಯನ್ನು ಕಾಪಾಡುವ ಅವರ ಧ್ಯೇಯವು ಮುಂದುವರಿಯಬೇಕು. ಮಹಿಳೆಯರ ರಕ್ಷಣೆಗಾಗಿನ ಅವರ ಹೋರಾಟವು ಸ್ಮರಣೆಯಲ್ಲಿ ಮುಂದುವರಿಯಬೇಕು. ಈ ಪಾದಯಾತ್ರೆ ಪೂರ್ಣಗೊಳ್ಳಬೇಕು ಎಂದು ಹೇಳಿದ್ದಾರೆ.
Advertisement