‘ಪ್ರತ್ಯೇಕ ರಾಷ್ಟ್ರ’ ಹೇಳಿಕೆ: ಡಿಕೆ.ಸುರೇಶ್ ನಿವಾಸವನ್ನು ಮುತ್ತಿಗೆ ಹಾಕಿದ ಬಿಜೆಪಿ, ವಿರೋಧ ಬೆನ್ನಲ್ಲೇ ಯೂಟರ್ನ್ ಹೊಡೆದ ಸಂಸದ?

ಪ್ರತ್ಯೇಕ ರಾಷ್ಟ್ರದ ಕುರಿತು ಹೇಳಿಕೆ ನೀಡಿರುವ ಸಂಸದ ಡಿಕೆ ಸುರೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ ಘಟನೆ ಭಾನುವಾರ ನಡೆಯಿತು.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ.
Updated on

ಬೆಂಗಳೂರು: ಪ್ರತ್ಯೇಕ ರಾಷ್ಟ್ರದ ಕುರಿತು ಹೇಳಿಕೆ ನೀಡಿರುವ ಸಂಸದ ಡಿಕೆ ಸುರೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ ಘಟನೆ ಭಾನುವಾರ ನಡೆಯಿತು.

ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಸುರೇಶ್ ಅವರ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ನುಗ್ಗಿದ್ದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಹೈಡ್ರಾಮಾ ನಡೆಯಿತು.

ಬಿಜೆಪಿ ಕಾರ್ಯಕರ್ತರು ಏಕಾಏಕಿ ಸುರೇಶ್ ಅವರ ನಿವಾಸಕ್ಕೆ ನುಗ್ಗಿತ್ತಿದ್ದಂತೆಯೇ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಯಿತು.

ಈ ನಡುವೆ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸುರೇಶ್ ಅವರು ಹೇಳಿಕೆಯಿಂದ ಯೂಟರ್ನ್ ಹೊಡೆದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಗಳನ್ನ ಬಿಜೆಪಿಯವರು ತಿರುಚುತ್ತಿದ್ದಾರೆ. ದೇಶವಿಭಜನೆ ಬಗ್ಗೆ ನಾನು ಹೇಳಿಲ್ಲ. ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ. ಬಿಜೆಪಿ ಕಾರ್ಯಕರ್ತರ ಹೋರಾಟಕ್ಕೆ ನನ್ನ ಸಹಕಾರ ಇದೆ. ದೇವರು ಅವರಿಗೆ ಒಳ್ಳೇದನ್ನ ಮಾಡಲಿ ಎಂದರು. ಅಲ್ಲದೆ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಿದರೆ ತಪ್ಪೇನಿದೆ. ನನ್ನ ಹೇಳಿಕೆಗಳು ಬಹಳ ಸ್ಪಷ್ಟವಾಗಿದೆ. ಬಿಜೆಪಿ ಕಾರ್ಯಕರ್ತರ ಹೋರಾಟದಲ್ಲಿ ತಪ್ಪೇನಿದೆ? ಹೋರಾಟಗಳು, ಪ್ರತಿಭಟನೆ ಪ್ರಜಾಪ್ರಭುತ್ವದ ಭಾಗ ಎಂದರು.

ಬಿಜೆಪಿ ಮುತ್ತಿಗೆ ವಿಚಾರವಾಗಿ ಮಾತನಾಡಿದ, ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಯಾರನ್ನ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಹೋರಾಟಕ್ಕೆ ಸಂಪೂರ್ಣ ಸಹಕಾರ ಸರ್ಕಾರ ಕೊಡುತ್ತದೆ. ನಾನು ಬಿಜೆಪಿ ಪ್ರತಿಭಟನೆಯನ್ನು ಸ್ವಾಗತ ಮಾಡುತ್ತೇನೆ. ದೇವರು ಬಿಜೆಪಿಗೆ ಒಳ್ಳೆಯದು ಮಾಡಲಿ ಎಂದರು.

ನಾನು ಈ ದೇಶ ವಿಭಜನೆ ಆಗಬೇಕು ಎಂದು ಹೇಳಿಲ್ಲ. ನನ್ನ ಹೇಳಿಕೆ ಬಹಳ ಸ್ಪಷ್ಟವಾಗಿದೆ. ಹಾಗಾಗಿ ಬಿಜೆಪಿಯವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಅವರ ಹೋರಾಟ ಯಶಸ್ವಿಯಾಗಲಿದೆ. ಅವರವರ ಭಾವನೆ ಹೇಳಲು ಎಲ್ಲರಿಗೂ ಹಕ್ಕಿದೆ. ನನ್ನ ಹೇಳಿಕೆಯನ್ನ ಸ್ಪಷ್ಟವಾಗಿ ರಾಜ್ಯ ಮತ್ತು ದೇಶದ ಜನತೆಗೆ ತೊರಿಸಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ. ಮಾದ್ಯಮಗಳು ಕೆಲವರನ್ನ ಗುರಿ ಮಾಡುತ್ತಿರುವುದು ಸರಿನಾ ತಪ್ಪಾ ಎಂದು ವಿಶ್ಲೇಷಣೆ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದು, ಈ ಬಜೆಟ್​​ ಅನ್ನು ಟೀಕಿಸುವ ಬರದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನು ನೀಡಿದ್ದರು.

ಕೇಂದ್ರದ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ. ದಕ್ಷಿಣ ಭಾರತದವರು ಧ್ವನಿ ಎತ್ತಬೇಕಾಗುತ್ತದೆ ಎಂದಿದ್ದರು.

ಪ್ರತ್ಯೇಕ ರಾಷ್ಟ್ರದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಡಿಕೆ ಸುರೇಶ್ ಅವರು ಜನರ ಮೇಲೆ ಹೇರಿ ಕೈತೊಳೆಯುವ ಪ್ರಯತ್ನ ಮಾಡಿದ್ದರು. ತಾವು ನೀಡಿರುವ ಹೇಳಿಕೆಗೆ ಸ್ಪಷ್ಟನೆ ನೀಡಿದ ಡಿಕೆ ಸುರೇಶ್​, ಜನರ ಭಾವನೆಗಳನ್ನು ಹೇಳಿದ್ದೇನೆಯೇ ಹೊರತು ಬೇರೇನೂ ಹೇಳಿಲ್ಲ ಎಂದು ಹೇಳಿದ್ದರು. ಅಲ್ಲದೆ, ನನ್ನ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com