ಜೆರೋಸಾ ಶಾಲೆ ಪ್ರಕರಣ: ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಿ: ಕಾಂಗ್ರೆಸ್ ಆಗ್ರಹ

ನಗರದ ಜೆಪ್ಪುವಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ ರಮಾನಾಥ್ ರೈ ಮತ್ತು ವಿನಯಕುಮಾರ್ ಸೊರಕೆ ಆಗ್ರಹಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಬಿ ರಮಾನಾಥ್ ರೈ
ಹಿರಿಯ ಕಾಂಗ್ರೆಸ್ ನಾಯಕ ಬಿ ರಮಾನಾಥ್ ರೈ

ಮಂಗಳೂರು: ನಗರದ ಜೆಪ್ಪುವಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ ರಮಾನಾಥ್ ರೈ ಮತ್ತು ವಿನಯಕುಮಾರ್ ಸೊರಕೆ ಆಗ್ರಹಿಸಿದ್ದಾರೆ.

ಮಂಗಳವಾರ ಕಾಂಗ್ರೆಸ್‌ ಮುಖಂಡರೊಂದಿಗೆ ಶಾಲೆಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸತ್ಯಗಳು ಹೊರಬರಬೇಕು. ಈ ಘಟನೆ ಜಿಲ್ಲೆಯ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದೆ. ಕೋಮು ಸೌಹಾರ್ದತೆ ಕಾಪಾಡುವುದು ನಮ್ಮ ಉದ್ದೇಶ. ಕೆಲವರು ಘಟನೆಯಿಂದ ಲಾಭ ಪಡೆಯುತ್ತಿದ್ದಾರೆ. ಆದರೆ ನಮ್ಮ ಪಕ್ಷ ಹಾಗಲ್ಲ. ಸುಂದರ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರ ಮೇಲಿದ್ದು, ಸರಿ ತಪ್ಪುಗಳ ಬಗ್ಗೆ ಚರ್ಚೆಯಾಗಬೇಕು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ, ತನಿಖೆಯಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆಂದು ಹೇಳಿದರು.

ವಿದ್ಯಾರ್ಥಿಗಳ ಹೇಳಿಕೆಗಳು, ರಾಜಕಾರಣಿಗಳು ವಿದ್ಯಾರ್ಥಿಗಳ ಹೇಳಿಕೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಸೇರಿದಂತೆ ಎಲ್ಲದರ ಬಗ್ಗೆಯೂ ತನಿಖೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಂತಹ ಶಾಲಾ ವಿಷಯಗಳಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಪರಿಹರಿಸುವ ಹೊಣೆಗಾರಿಕೆ ಶಿಕ್ಷಣ ಇಲಾಖೆಯ ಮೇಲಿದೆ ಎಂದರು.

ಕೆಪಿಸಿಸಿ ವಕ್ತಾರ ಫರ್ಜಾನಾ ಮಾತನಾಡಿ, ಶಿಕ್ಷಕರು ಯಾವುದೇ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆ ಅದನ್ನು ಖಂಡಿಸಬೇಕು, ಆದರೆ ಈ ಪ್ರಕರಣದಲ್ಲಿ ಶಿಕ್ಷಕರನ್ನು ದೂಷಿಸಲು ನಿಖರವಾದ ಮಾಹಿತಿ ಇಲ್ಲ. ಆದರೆ, ಸೋಮವಾರ ನಡೆದ ಘಟನೆ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು.

ಇದೇ ವೇಳೆ ‘ಜೈ ಶ್ರೀ ರಾಮ್’ ಎಂಬ ಘೋಷಣೆಗಳನ್ನು ಕೂಗುವಂತೆ ಬಿಜೆಪಿ ಮುಖಂಡರು ಶಾಲಾ ವಿದ್ಯಾರ್ಥಿಗಳಿಗೆ ತಾಕೀತು ಮಾಡಿದ್ದರ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜೆ.ಆರ್.ಲೋಬೋ, ಮಮತಾ ಗಟ್ಟಿ, ಶಶಿಧರ ಹೆಗಡೆ, ಶಾಹುಲ್ ಹಮೀದ್, ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com