

ಕುವೆಂಪು'ರ ಘೋಷವಾಕ್ಯಕ್ಕೆ ಸರ್ಕಾರದಿಂದ ಕತ್ತರಿ; ಬಿಜೆಪಿ ಕಿಡಿ
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಶಾಲೆಗಳ ಪ್ರವೇಶದ್ವಾರದಲ್ಲಿರುವ ಘೋಷವಾಕ್ಯ ಬದಲಾವಣೆ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮೊದಲು ಶಾಲೆಗಳ ಪ್ರವೇಶದ್ವಾರದಲ್ಲಿದ್ದ ರಾಷ್ಟ್ರಕವಿ ಕುವೆಂಪು ಅವರ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ" ಘೋಷವಾಕ್ಯವನ್ನು ಬದಲಾಯಿಸಲಾಗಿದೆ. 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು' ಎಂದು ಬದಲಾವಣೆ ಮಾಡಲಾಗಿದೆ. ವಿಜಯಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಬರಹವನ್ನು ಬದಲಿಸಿ ಹಾಕಿ ವಿವಾದಕ್ಕೆ ನಾಂದಿ ಹಾಡಿದೆ. ಘೋಷವಾಕ್ಯ ಬದಲಾವಣೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶವಿಲ್ಲ. ಆದೇಶ ನೀಡಿದರೆ ಮತ್ತೊಂದು ವಿವಾದಕ್ಕೆ ಕಾರಣವಾಗುತ್ತದೆಂದು ಆದೇಶವಿಲ್ಲದೆ ಕೇವಲ ಮೌಖಿಕವಾಗಿ ಸೂಚನೆ ನೀಡಿರುವ ಹಿನ್ನೆಲೆ ಘೋಷವಾಕ್ಯ ಬದಲಾವಣೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಸೂಚನೆ ಮೇರೆಗೆ ಘೋಷವಾಕ್ಯ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಘೋಷವಾಕ್ಯಕ್ಕೆ ಕತ್ತರಿ; ಸಚಿವರಿಂದ ಸಮರ್ಥನೆ
ಸರ್ಕಾರಿ ಶಾಲೆಗಳಲ್ಲಿ 'ಜ್ಞಾನ ದೇಗುಲವಿದು.. ಕೈ ಮುಗಿದು ಒಳಗೆ ಬಾ' ಎಂಬ ಧ್ಯೇಯವಾಕ್ಯವನ್ನು 'ಜ್ಞಾನ ದೇಗುಲವಿದು.. ಧೈರ್ಯವಾಗಿ ಪ್ರಶ್ನಿಸು' ಎಂಬುದಕ್ಕೆ ಬದಲಾಯಿಸಲಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದೇ ವಿಚಾರವಾಗಿ ಇದೀಗ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ಕಿಡಿಕಾರಿದೆ. ಬಡ ಶಾಲಾ ಮಕ್ಕಳ ಬ್ರೈನ್ ವಾಶ್ ಮಾಡಲು 'ಧ್ಯೇಯ ವಾಕ್ಯ' ಬದಲಾವಣೆ ಮಾಡಲಾಗಿದೆ. ಈ ಮೂಲಕ ಹಿಂದುಳಿದ ಬಡ ವಿದ್ಯಾರ್ಥಿಗಳು ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ವಿರೋಧಿಸುವಂತೆ ವಿಷ ಬೀಜ ಬಿತ್ತಿ, ಎಡಬಿಡಂಗಿ ಸಿದ್ಧಾಂತವನ್ನು ಹೇರಲಾಗುತ್ತಿದೆ ಎಂದು ಹೇಳಿದೆ. ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಸರ್ಕಾರ ಈ ಬಗ್ಗೆ ಸಮರ್ಥನೆ ನೀಡಿದೆ. ಸಾಮಾಜಿಕ ಸ್ಥಿತಿಗಳ ತಕ್ಕಂತೆ ಬದಲಾವಣೆ ಆಗಬೇಕು. ಧೈರ್ಯವಾಗಿ ಪ್ರಶ್ನಿಸಿ ಎಂದಿದ್ದರಲ್ಲಿ ತಪ್ಪಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದರೆ, ಘೋಷವಾಕ್ಯ ಬದಲಾವಣೆಗೆ ಕಾರಣ ಏನೆಂಬುದು ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಟಾಟಾ ಸಮೂಹದಿಂದ ರಾಜ್ಯದಲ್ಲಿ 2,300 ಕೋಟಿ ರೂ. ಹೂಡಿಕೆ
ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆಗೆ ಸಹಿ ಹಾಕಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮುಂದಾಳತ್ವದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ವ್ಯವಹಾರ ಅಧಿಕಾರಿ ನಿಪುಣ್ ಅಗರವಾಲ್ ಹಾಗೂ ಟಿಎಎಸ್ಎಲ್ ಸಿಇಒ ಸುಕರಣ್ ಸಿಂಗ್ ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ವಿಧಾನಸೌಧದಲ್ಲಿ ನಡೆದ ಒಡಂಬಡಿಕೆ ವಿನಿಮಯ ನಂತರ ಮಾತನಾಡಿದ ಎಂಬಿ ಪಾಟೀಲ್, 'ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಅಲ್ಲದೆ ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇಡೀ ಭಾರತದಲ್ಲೇ ಇದು ಮೊಟ್ಟ ಮೊದಲ ಯೋಜನೆಯಾಗಿದೆ ಎಂದರು.
ರಾಕ್‌ಲೈನ್ ಮಾಲ್‌ಗೆ ಹಾಕಿರುವ ಸೀಲ್ ಓಪನ್ ಮಾಡಿ; ಬಿಬಿಎಂಪಿ ಕರ್ನಾಟಕ ಹೈಕೋರ್ಟ್ ಆದೇಶ
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಕ್‌ಲೈನ್ ಮಾಲ್‌ಗೆ ಬಿಬಿಎಂಪಿ ಬೀಗ ಚಡಿದಿತ್ತು. ಬಿಬಿಎಂಪಿ ಅಧಿಕಾರಿಗಳು ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಒಡೆತನದ ಕಟ್ಟಡವನ್ನು ಸೀಲ್ ಮಾಡಿತ್ತು.ಇದೀಗ ಹೈಕೋರ್ಟ್‌ನಲ್ಲಿ ರಾಕ್‌ಲೈನ್ ವೆಂಕಟೇಶ್‌ಗೆ ರಿಲೀಫ್ ಸಿಕ್ಕಿದ್ದು ರಾಕ್‌ಲೈನ್ ಮಾಲ್‌ಗೆ ಹಾಕಿರುವ ಸೀಲ್ ಓಪನ್ ಮಾಡುವಂತೆ ಬಿಬಿಎಂಪಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ಪೀಠವು ಈ ಆದೇಶ ಹೊರಡಿಸಿದೆ. ಬಿಬಿಎಂಪಿ ಅಧಿಕಾರಿಗಳು ಕಳೆದ ಬುಧವಾರ ನಗರದ ಜಾಲಹಳ್ಳಿ ಕ್ರಾಸ್ ಬಳಿ ಇರುವ ರಾಕ್‌ಲೈನ್ ಮಾಲ್ ಹಾಗೂ ಮೋಹನ್ ಚಿತ್ರಮಂದಿರಕ್ಕೆ ಪೊಲೀಸರು ಹಾಗೂ ಮಾರ್ಷಲ್‌ಗಳ ಸಮ್ಮುಖದಲ್ಲಿ ಅಂದು ಬಿಬಿಎಂಪಿ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ತಂಡ ಮಾಲ್‌ಗೆ ಬೀಗ ಹಾಕಿತ್ತು.
ಸಿದ್ದರಾಮಯ್ಯ ವಿರುದ್ಧದ ಪ್ರಕರಣಕ್ಕೆ ಸುಪ್ರೀಂ ತಡೆ
2022ರಲ್ಲಿ ರಾಜ್ಯದಲ್ಲಿ ನಡೆದಿದ್ದ ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪಿಕೆ ಮಿಶ್ರಾ ಅವರ ಪೀಠವು ಕರ್ನಾಟಕ ಸರ್ಕಾರ ಮತ್ತು ಪ್ರಕರಣದ ದೂರುದಾರರಿಗೆ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯ ಸಚಿವರಾದ ಎಂ ಬಿ ಪಾಟೀಲ್ ಮತ್ತು ರಾಮಲಿಂಗಾ ರೆಡ್ಡಿ ಅವರಿಗೆ 10,000 ರೂಪಾಯಿ ದಂಡ ವಿಧಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಮಾರ್ಚ್ 6ರಂದು ವಿಶೇಷ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇನ್ನು ಬಜೆಟ್ ಕಾರ್ಯ ಹಾಗೂ ನಿರಂತರ ಜಿಲ್ಲಾ ಪ್ರವಾಸದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನಾರಾಗ್ಯ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ಕಾವೇರಿ ನಿವಾಸಕ್ಕೆ ತೆರಳಿದ್ದಾರೆಂದು ತಿಳಿದುಬಂದಿದೆ.
ಖ್ಯಾತ ಕಾದಂಬರಿಕಾರ ಕೆಟಿ ಗಟ್ಟಿ ನಿಧನ
ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ 86 ವರ್ಷದ ಕೆ.ಟಿ ಗಟ್ಟಿ ನಿಧನರಾಗಿದ್ದಾರೆ. ಮೂಲತ ಕಾಸರಗೋಡಿನ ಕೂಡ್ಲುವಿನವರಾದ ಕೂಡ್ಲು ತಿಮ್ಮಪ್ಪ ಗಟ್ಟಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಅಲ್ಲದೆ ಹಲವು ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು. ಶಬ್ದಗಳು, ಸೌಮ್ಯ, ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ ಕಾದಂಬರಿಗಳನ್ನು ಬರೆದಿದ್ದಾರೆ.