ನಾಡಗೀತೆ ಕಡ್ಡಾಯವಲ್ಲ ಆದೇಶ ಹಿಂಪಡೆದ ರಾಜ್ಯ ಸರ್ಕಾರ. ಈ ದಿನದ ಸುದ್ದಿ ಮುಖ್ಯಾಂಶಗಳು: 21-02-24

40 ವಕೀಲರ ವಿರುದ್ಧ ಎಫ್ಐಆರ್; ಪಿಎಸ್ಐ ತನ್ವೀರ್ ಅಮಾನತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನಾಡಗೀತೆ ಕಡ್ಡಾಯವಲ್ಲ ಆದೇಶ ಹಿಂಪಡೆದ ರಾಜ್ಯ ಸರ್ಕಾರ

ರಾಜ್ಯದ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಸರ್ಕಾರದ ಸುತ್ತೋಲೆ ವಿವಾದಕ್ಕೆ ಕಾರಣವಾಗಿದ್ದು ಈ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಆದೇಶವನ್ನು ಹಿಂಪಡೆದಿದೆ. ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು, ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ನಾಡಗೀತೆ ಹಾಡಲು ವಿನಾಯ್ತಿ ನೀಡಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದೇಶ ಪ್ರತಿ ಹೊರ ಬೀಳುತ್ತಿದ್ದಂತೆ ಸಾರ್ವಜನಿಕರು, ವಿಪಕ್ಷಗಳ ನಾಯಕರು ಸರ್ಕಾರ ನಡೆಗೆ ಬೇಸರ ವ್ಯಕ್ತಪಡಿಸಿದ್ದೂ ಅಲ್ಲದೇ ಕೂಡಲೇ ಆದೇಶ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದರು. ಈ ಬಗ್ಗೆ ಎಚ್ಚೆತ್ತ ಸರ್ಕಾರ ಸುತ್ತೋಲೆಯನ್ನು ಹಿಂಪಡೆದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನಮ್ಮಗೆ ಎಲ್ಲಾ ಶಾಲೆಗಳು ಒಂದೇ. ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ ಅನುದಾನಿತ‌ ಶಾಲೆ ಅಂತಾ ಹಾಕಿದ್ದಾರೆ. ಎಲ್ಲ ಶಾಲೆಗಳಲ್ಲೂ ನಾಡಗೀತೆ ಹಾಡಿಸಲು ಸುತ್ತೋಲೆ ಹೊರಡಿಸುತ್ತೇವೆ. ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ ಎಂದರು.

ವಕೀಲರ ವಿರುದ್ಧ ಎಫ್ಐಆರ್; ಪಿಎಸ್ಐ ತನ್ವೀರ್ ಅಮಾನತು

40 ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ವಕೀಲರು ನಡೆಸುತ್ತಿರುವ ಪ್ರತಿಭಟನೆ ಇಡೀ ರಾಮನಗರ ಜಿಲ್ಲೆಯಲ್ಲಿ ಆಕ್ರೋಶವನ್ನು ಹೆಚ್ಚಿಸಿತ್ತು. ಇದು ರಾಜಕೀಯ ತಿರುವು ಪಡೆದುಕೊಂಡಿದ್ದು ವಿಧಾನಸಭಾ ಕಲಾಪದಲ್ಲೂ ಚರ್ಚೆಯಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ರಾಮನಗರದ 40 ವಕೀಲರ ವಿರುದ್ಧ ಐಜೂರು ಪೊಲೀಸ್ ಠಾಣೆ ಪಿಎಸ್​ಐ ಆಗಿದ್ದ ತನ್ವೀರ್ ಹುಸೇನ್ ಎಫ್​ಐಆರ್​ ದಾಖಲಿಸಿದ್ದರು. ಎಫ್​ಐಆರ್ ರದ್ದು ಮಾಡುವಂತೆ ಆಗ್ರಹಿಸಿ ವಕೀಲರು ಸೋಮವಾರ ಪ್ರತಿಭಟನೆ ಆರಂಭಿಸಿದರು. ಅಲ್ಲದೆ ಇಂದು ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪ್ರತಿಭಟನೆ ಜೋರಾಗುತ್ತಿರುವುದನ್ನು ಅರಿತ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಪಿಎಸ್ಐ ತನ್ವೀರ್ ಹುಸೇನ್‌ರನ್ನು ಅಮಾನತು ಮಾಡಿರುವುದಾಗಿ ವಿಧಾನಸಭೆಯಲ್ಲಿ ಪ್ರಕಟಿಸಿದರು.

ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ನಿಧನ

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು ಇಂದು ನವದೆಹಲಿಯಲ್ಲಿ ನಿಧನರಾಗಿದ್ದಾರೆ. ಫಾಲಿ ನಾರಿಮನ್ ಅವರಿಗೆ 95 ವರ್ಷ ವಯಸ್ಸಾಗಿತ್ತು. 70 ವರ್ಷಗಳಿಗೂ ಹೆಚ್ಚು ಕಾಲ ವಕೀಲ ವೃತ್ತಿ ನಡೆಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಕರ್ನಾಟಕದ ಪರ ಕಾವೇರಿ, ಕೃಷ್ಣ ಮಹದಾಯಿ ಜಲವಿವಾದಗಳಲ್ಲಿ ವಾದ ಮಾಡಿದ್ದರು. 25 ವರ್ಷಗಳ ಕಾಲ ಕಾವೇರಿ ವಿವಾದದಲ್ಲಿ ಕರ್ನಾಟಕವನ್ನ ಪ್ರತಿನಿಧಿಸಿದ್ದ ಅವರು, ಕಾವೇರಿ ನೀರಿನ ಹರಿವು 380 ಟಿಎಂಸಿಯಿಂದ 192 ಟಿಎಂಸಿಗೆ ಇಳಿಸಿದ ಸಾಧನೆ ಅವರಿಗೆ ಸಲ್ಲುತ್ತದೆ. 1991ರ ಜನವರಿಯಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರ ಸಂಖ್ಯೆ ಪ್ರದರ್ಶಿಸಬೇಕು

ರಾಜ್ಯದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರ ಸಂಖ್ಯೆಯನ್ನು ತಮ್ಮ ಕ್ಯಾಂಪಸ್‌ಗಳಲ್ಲಿ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸೂಚನೆಯಂತೆ ಭಾಷಾ ಅವಶ್ಯಕತೆಗಳನ್ನು ಅನುಸರಿಸಲು ವಿಫಲವಾದರೆ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಹೇಳಿದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ 2022ರ ಇತ್ತೀಚಿನ ತಿದ್ದುಪಡಿಯು ವಾಣಿಜ್ಯ, ಕೈಗಾರಿಕಾ ಮತ್ತು ವ್ಯಾಪಾರ ಉದ್ಯಮಗಳು, ಟ್ರಸ್ಟ್‌ಗಳು, ಸಲಹಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com