ಕಳ್ಳತನಕ್ಕೆಂದು ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿದ್ದ 17 ವರ್ಷದ ಬಾಲಕನ ಮೇಲೆ ಕಾರ್ಮಿಕರಿಂದ ಹಲ್ಲೆ

ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆರ್‌ಟಿಒ ರಸ್ತೆಯ ಉಪಕಾರ್‌ ಲೇಔಟ್‌ ಬಳಿ ಎಂಟು ಮಂದಿ ಕೂಲಿ ಕಾರ್ಮಿಕರು 17 ವರ್ಷದ ಬಾಲಕನನ್ನು ಕಂಬಕ್ಕೆ ಕಟ್ಟಿ ಬೆಲ್ಟ್‌ ಮತ್ತು ದೊಣ್ಣೆಗಳಿಂದ ಥಳಿಸಿರುವ ಘಟನೆ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆರ್‌ಟಿಒ ರಸ್ತೆಯ ಉಪಕಾರ್‌ ಲೇಔಟ್‌ ಬಳಿ ಎಂಟು ಮಂದಿ ಕೂಲಿ ಕಾರ್ಮಿಕರು 17 ವರ್ಷದ ಬಾಲಕನನ್ನು ಕಂಬಕ್ಕೆ ಕಟ್ಟಿ ಬೆಲ್ಟ್‌ ಮತ್ತು ದೊಣ್ಣೆಗಳಿಂದ ಥಳಿಸಿರುವ ಘಟನೆ ನಡೆದಿದ್ದು, ಗಾಯಗೊಂಡಿರುವ ಬಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸೋಮವಾರ ಮುಂಜಾನೆ 2 ರಿಂದ 3.30 ರ ನಡುವೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ಅಪ್ರಾಪ್ತನ ವಿರುದ್ಧ ದೂರು ದಾಖಲು

ಗಾಯಗೊಂಡ ಬಾಲಕ ಆರ್.ಜಿ. ನಗರದ ಹೆಗ್ಗನಹಳ್ಳಿ 1ನೇ ಕ್ರಾಸ್ ನಿವಾಸಿ. ಈತ ತನ್ನ ಸ್ನೇಹಿತ ಪ್ರಜ್ವಲ್ ಜೊತೆಗೂಡಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ತೆರಳಿದ್ದ. ಈ ವೇಳೆ ಅಲ್ಲೇ ಮಲಗಿದ್ದ ಎಂಟು ಮಂದಿ ಕೂಲಿ ಕಾರ್ಮಿಕರ ಪೈಕಿ ಮೂವರ ಮೇಲೆ ಹಲ್ಲೆ ನಡೆಸಿದ ಪ್ರಜ್ವಲ್, ನಗದು, ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ. ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಲು ಜಾರಿ ಕೆಳಗೆ ಬಿದ್ದ ಅಪ್ರಾಪ್ತ ಕಾರ್ಮಿಕರಿಗೆ ಸಿಕ್ಕಿಬಿದ್ದಿದ್ದಾನೆ.

ಪ್ರಾತಿನಿಧಿಕ ಚಿತ್ರ
ಬಾಡಿಗೆದಾರರ ಮೇಲೆ ಮಾಲೀಕನ ಸಂಬಂಧಿ ಗೂಂಡಾಗಿರಿ: ಮನೆ ಖಾಲಿ ಮಾಡುವಂತೆ ವೃದ್ದ ತಾಯಿಗೆ ಥಳಿತ

ಕಾರ್ಮಿಕರು ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರು ಬಾಲಕ ಮತ್ತು ಪ್ರಜ್ವಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಮಚ್ಚನ್ನು ಹಿಡಿದುಕೊಂಡಿದ್ದ ಪ್ರಜ್ವಲ್, ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಅವರಿಂದ 29,000 ರೂ. ನಗದು ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡಿದ್ದಾನೆ. ಇತರ ಕಾರ್ಮಿಕರು ಅವರನ್ನು ಸುತ್ತುವರೆದಿದ್ದರಿಂದ ಪ್ರಜ್ವಲ್ ಪರಾರಿಯಾಗಿದ್ದಾನೆ.

ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೆಳಗೆ ಬಿದ್ದ ಬಾಲಕನ ಮುಖಕ್ಕೆ ಗಾಯಗಳಾಗಿವೆ. ಕೂಲಿ ಕಾರ್ಮಿಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನ ತಂದೆ ಎಲ್ ನಾರಾಯಣ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಜ್ವಲ್ ಹಲ್ಲೆಯಿಂದ ಗಾಯಗೊಂಡ ಮೂವರು ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕನನ್ನು ಉಳ್ಳಾಲ ಮುಖ್ಯರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡಿರುವ ಕಾರ್ಮಿಕರಾದ ಲಬ್ಕುಶ್, ರಜಿತ್ ಮತ್ತು ರಿಂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾರಾಯಣ ಅವರ ದೂರಿನ ಆಧಾರದ ಮೇಲೆ, ಕಾರ್ಮಿಕರ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಜೊತೆಗೆ ಅಪಾಯಕಾರಿ ಆಯುಧಗಳಿಂದ (ಐಪಿಸಿ 324) ಗಾಯಗೊಳಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಜ್ವಲ್‌ನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com