
ಬೆಂಗಳೂರು: ಯಲಹಂಕ ನ್ಯೂ ಟೌನ್‌ನಲ್ಲಿರುವ ಪ್ರತಿಷ್ಠಿತ ಈಜುಕೊಳದ 53 ವರ್ಷದ ಮಾಲೀಕರೊಬ್ಬರು ಈಜುಕೊಳದ ಆವರಣದಲ್ಲಿಯೇ ಇತ್ತೀಚೆಗೆ 41 ವರ್ಷದ ಮಹಿಳೆಯೊಬ್ಬರ ಉಂಗುರದ ಬೆರಳನ್ನು ಕಚ್ಚಿ, ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.
ಮಹಿಳೆ ಇತರ ಐವರ ಜೊತೆ ಈಜುಕೊಳಕ್ಕೆ ಬಂದಿದ್ದರು. ಈಜುಕೊಳದಲ್ಲಿ ಸ್ವಲ್ಪ ಸಮಯ ಕಳೆದ ಬಳಿಕ ಹೊರಗಿನಿಂದ ತಂದಿದ್ದ ಮದ್ಯ ಸೇವಿಸಿದ್ದಾರೆ ಎನ್ನಲಾಗಿದೆ. ಅದನ್ನು ನೋಡಿದ ಮಾಲೀಕರು ಮುನ್ನೆಚ್ಚರಿಕೆಯಾಗಿ ಆಕೆಯು ಈಜುಕೊಳವನ್ನು ಪ್ರವೇಶಿಸದಂತೆ ತಡೆದಿದ್ದಾರೆ. ಈ ವೇಳೆ ಮಹಿಳೆ ಮದ್ಯದ ಬಾಟಲಿಯಿಂದ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಮಾಲೀಕ ತನ್ನನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಮಾಪ್ ಸ್ಟಿಕ್‌ನಿಂದ ಆಕೆಗೆ ಥಳಿಸಿದ್ದಾರೆ.
ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈಜುಕೊಳದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವೀರಸಾಗರದ ಅಂಜನಾದ್ರಿ ಈಜುಕೊಳದಲ್ಲಿ ಮಂಗಳವಾರ ಸಂಜೆ 4.35 ರಿಂದ 5.30 ರ ನಡುವೆ ಈ ಘಟನೆ ನಡೆದಿದೆ. ಗೃಹಿಣಿಯಾಗಿರುವ ಮಹಿಳೆ ಯಲಹಂಕ ಹೊಸನಗರ 4ನೇ ಹಂತದ ನಿವಾಸಿ. ಅವರು ಬುಧವಾರ ದೂರು ದಾಖಲಿಸಿದ್ದಾರೆ.
ಮಾಲೀಕನನ್ನು ಕೇಬಲ್ ಜಯಣ್ಣ ಎಂದು ಗುರುತಿಸಲಾಗಿದೆ.
ಈಜುಕೊಳದ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಈಜುಕೊಳವನ್ನು ನೋಡಿಕೊಳ್ಳುವ ಅಂಜನ್ ಗೌಡ ಎಂದು ಗುರುತಿಸಲಾದ ವ್ಯಕ್ತಿ ಮಾತನಾಡಿ, ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಿಂದಾಗಿ ಅಂದು ಮದ್ಯವನ್ನು ನಿಷೇಧಿಸಲಾಗಿತ್ತು ಮತ್ತು ಮಹಿಳೆ ಅನುಮತಿಯಿಲ್ಲದೆ ಆವರಣದೊಳಗೆ ಮದ್ಯವನ್ನು ತಂದಿದ್ದರು ಎಂದು ತಿಳಿಸಿದ್ದಾರೆ.
'ಮದ್ಯ ಸೇವಿಸುವ ಮುನ್ನ, ಗುಂಪು ಈಜುಕೊಳದಲ್ಲಿ ಸ್ವಲ್ಪ ಸಮಯ ಕಳೆದರು. ಮದ್ಯ ಸೇವಿಸಿದ ನಂತರ ದೂರುದಾರರು 9 ಅಡಿ ಆಳದ ಕೊಳಕ್ಕೆ ಪ್ರವೇಶಿಸಲು ಬಯಸಿದ್ದರು. ಆಕೆಯನ್ನು ತಡೆದ ಮಾಲೀಕನ ಮೇಲೆ ಆಕೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಕೊಳದ ಬಳಿ ಇರುವ ಸಿಸಿಟಿವಿಯಲ್ಲಿ ಎಲ್ಲವೂ ದಾಖಲಾಗಿದೆ. ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರ ತಂಡ ಅಲ್ಲಿಗೆ ಬಂದಿತ್ತು. ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆ ಅತ್ತೂರು ಲೇಔಟ್‌ನಲ್ಲಿರುವ ಮಾಲೀಕರ ಮನೆಯ ಬಳಿಯೇ ವಾಸವಿದ್ದರಿಂದ ಅವರಿಗೆ ಪರಿಚಯವಿದ್ದರು. ತನ್ನ ಸ್ನೇಹಿತೆಯ ಹುಟ್ಟುಹಬ್ಬದ ಆಚರಣೆಗಾಗಿ ಈಜುಕೊಳದೊಳಗೆ ಖಾಸಗಿ ಕೋಣೆಯನ್ನು ಒದಗಿಸುವಂತೆ ಮಾಲೀಕರಿಗೆ ಮನವಿ ಮಾಡಿದ್ದರು' ಎಂದು ಗೌಡ ಹೇಳಿದರು.
'ನಾವು ಈಜುಕೊಳದ ಮಾಲೀಕ ಜಯಣ್ಣ ಅವರ ಹುಡುಕಾಟದಲ್ಲಿದ್ದೇವೆ. ದೂರುದಾರರು ಚಿಕಿತ್ಸೆ ಪಡೆದಿದ್ದಾರೆ ಮತ್ತು ಚಿಕಿತ್ಸೆಯ ದಾಖಲೆಯನ್ನು ಪುರಾವೆಯಾಗಿ ಒದಗಿಸಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement