ದೆಹಲಿ ಚಲೋ: ರಾಜ್ಯ ರೈತರಿಗೆ 'ಟೆಂಪಲ್ ಟೂರ್' ಆಗಿ ಮಾರ್ಪಟ್ಟ ಪ್ರತಿಭಟನೆ!
ಬೆಂಗಳೂರು: ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜ್ಯದ ರೈತರು, ಪೊಲೀಸರ ಕಿರುಕುಳ ಎದುರಿಸಿರುವುದು ಇದೀಗ ಬಹಿರಂಗಗೊಂಡಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 23 ಮಹಿಳೆಯರು ಸೇರಿದಂತೆ 58 ಸದಸ್ಯರ ರೈತರ ಪಡೆ ದೆಹಲಿ ಚಲೋ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.
ಈ ರೈತರನ್ನು ಭೋಪಾಲ್ ರೈಲು ನಿಲ್ದಾಣದಲ್ಲಿಯೇ ಪೊಲೀಸರು ತಡೆದಿದ್ದು, ಅವರು ದೆಹಲಿ ತಲುಪದಂತೆ ಮಾಡಲು ಸಾಕಷ್ಟು ಕಿರುಕುಳ ನೀಡಿದ್ದಾರೆಂದು ತಿಳಿದುಬಂದಿದೆ.
ಫೆಬ್ರವರಿ 20 ರಂದು ಪೊಲೀಸರು ಭೋಪಾಲ್ ರೈಲು ನಿಲ್ದಾಣದಲ್ಲಿ ನಮ್ಮನ್ನು ತಡೆದಿದ್ದರು. ನಾವಿದ್ದ ಭೋಗಿಗೆ ಬಂದಿದ್ದ ಪೊಲೀಸರು ಲಗೇಜು ಸಮೇತ ಕೆಳಗಿಳಿಯುವಂತೆ ಮಾಡಿದ್ದರು. ನಂತರ ಯಾವುದೇ ಮೂಲಸೌಕರ್ಯಗಳಿಲ್ಲದ ಹಳೆಯ ಕಟ್ಟಡದಲ್ಲಿ ನಮ್ಮನ್ನು ಕೂಡಿ ಹಾಕಿದ್ದರು. ಇದರ ವಿರುದ್ಧ ನಾವು ಪ್ರತಿಭಟಿಸಿದ್ದೆವು. ನಂತರ ಚೌಲ್ಟ್ರಿ ವೊಂದಕ್ಕೆ ಸ್ಥಳಾಂತರಿಸಿದ್ದರು. ಈ ವೇಳೆ ನಡೆದ ಕೆಲ ಗಲಿಬಿಲಿಗಳಲ್ಲಿ ಕೆಲ ರೈತರ ತಲೆಗೆ ಗಾಯಗಳಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುವ ಭಯದಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸದೆ, ಹೊರರೋಗಿ ವಿಭಾಗಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರು ಕೊಟ್ಟ ಔಷಧಿಗಳನ್ನು ನೀಡಿದ್ದರು.
ನಂತರ ನಾವು ಚೌಲ್ಟ್ರಿಯ ಟೆರೇಸ್ ನಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದ್ದೆವು. ಇದು ಸ್ಥಳೀಯ ಮಾಧ್ಯಮ ಹಾಗೂ ಸಾರ್ವಜನಿಕರ ಗಮನ ಸೆಳೆದಿತ್ತು. ನಂತರ ಬಸ್ ನಲ್ಲಿ ನಮ್ಮನ್ನು ಉಜ್ಜಯಿಸಿ ದೇವಸ್ಥಾನಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದರು. ಈ ವೇಳೆ ಪೊಲೀಸರಪು ನಮ್ಮನ್ನು ನಕ್ಸಲರಂತೆ ನಡೆಸಿಕೊಂಡರು ಎಂದು ಬರದನಪುರದ ರೈತ ನಾಗರಾಜ್ ಎಂಬುವವರು ಹೇಳಿದ್ದಾರೆ.
ಇದಾದ ಬಳಿಕ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯದ ರೈತರು ಭಾಗವಹಿಸಲು ಅವಕಾಶ ನೀಡಬೇಕುಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದ ಬಳಿಕ ಪರಿಸ್ಥಿತಿ ಬದಲಾಯಿತು.
ಮಧ್ಯಪ್ರದೇಶ ಪೊಲೀಸರು ನಮ್ಮನ್ನು ಕಾಶಿ ವಿಶ್ವನಾಥ ದೇವಾಲಯದ ರೈಲಿನಲ್ಲಿ ಕೂರಿಸಿ, ಅಯೋಧ್ಯೆಯ ರಾಮಮಂದಿರದಲ್ಲಿ ವಿಐಪಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಈ ಮೂಲಕ ಪ್ರಕರಣದಲ್ಲಿ ತಮ್ಮದೇನೂ ತಪ್ಪಿಲ್ಲ ಎಂಬಂತೆ ಕೈತೊಳೆದುಕೊಂಡುಬಿಟ್ಟರು.
ಬಳಿಕ ಉತ್ತರಪ್ರದೇಶ ತಲುಪಿದ ನಾವು, ಅಲ್ಲಿ ದೆಹಲಿ ತಲುಪಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದೆವು. ಆದರೆ, ಅಲ್ಲಿಯೂ ಪೊಲೀಸರೂ ನಮಗೆ ಕಿರುಕುಳ ನೀಡಿದ್ದರು.
ನಾವು ಹೋದಲ್ಲೆಲ್ಲಾ ನಮ್ಮನ್ನು ಹಿಂಬಾಲಿಸಿದ್ದರು. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅಲ್ಲಿನ ಪೊಲೀಸರು ಇದನ್ನು ನೆಪವಾಗಿಸಿಕೊಂಡು ಒತ್ತಾಯಪೂರ್ವಕವಾಗಿ ನಮ್ಮನ್ನು ವಾರಣಾಸಿ ರೈಲು ನಿಲ್ದಾಣದಿಂದ ಕರ್ನಾಟಕಕ್ಕೆ ರೈಲು ಹತ್ತಿಸಿದ್ದರು ಎಂದು ತಮಗಾದ ಕಹಿ ಅನುಭವವನ್ನು ರೈತರು ಬಹಿರಂಗಪಡಿಸಿದ್ದಾರೆ.


