ಬೆಂಗಳೂರು: ನಗರದ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಅಳವಡಿಕೆಗೆ ನೀಡಲಾಗಿದ್ದ ಗಡುವು ಗುರುವಾರಕ್ಕೆ ಕೊನೆಗೊಳ್ಳಲಿದ್ದು, ಮಾರ್ಚ್ 1 ರಿಂದ ಆದೇಶ ಪಾಲನೆ ಮಾಡದ ಮಳಿಗೆಗಳ ವ್ಯಾಪಾರ ಪರವಾನಗಿ ರದ್ದುಪಡಿಸಿ, ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ.
ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಯ ಗಡುವನ್ನು ಬಿಬಿಎಂಪಿ ಒಂದು ದಿನ ವಿಸ್ತರಣೆ ಮಾಡಿತ್ತು, ಕಾಲಾವಕಾಶ ಬುಧವಾರಕ್ಕೆ ಮುಗಿದಿದ್ದರೂ ಕೂಡಾ ಅಂಗಡಿ ಮುಂಗಟ್ಟುಗಳ ಮುಂದಿನ ನಾಮಫಲಕಗಳು ಬದಲಾವಣೆಯಾಗಿರಲಿಲ್ಲ. ಈ ಹಿನ್ನೆಲೆ ಮತ್ತೂಂದು ದಿನ ಅವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯೂ ಗುರುವಾರ ಸಂಜೆಯ ವೇಳೆಗೆ ಮುಗಿಯಲಿದೆ.
ಹೀಗಾಗಿ ನಿಯಮ ಪಾಲನೆ ಮಾಡದ ಅಂಗಡಿಗಳಿಗೆ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಸೇರಿದಂತೆ ಶೆ.60ಷ್ಟು ನಾಮಫಲಕಗಳನ್ನು ಬದಲಾವಣೆ ಮಾಡದಿದ್ದರೆ ಉದ್ದಿಮೆಗಳ ಪರವಾನಗಿಯನ್ನು ಅಮಾನತುಗೊಳಿಸಲು ಹಾಗೂ ಬೀಗ ಮುದ್ರೆ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶದಲ್ಲಿ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಫೆ.28ರೊಳಗಡೆ ಸುಮಾರು 55,187 ವಾಣಿಜ್ಯ ಮಳಿಗೆ/ಉದ್ದಿಮೆಗಳಿಗೆ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿಕೊಳ್ಳಲು ನೋಟಿಸ್ ಜಾರಿ ಮಾಡಲಾಗಿತ್ತು. ಅದರಂತೆ, ಫೆಬ್ರವರಿ 28ರ ವರೆಗೆ 52,134 ವಾಣಿಜ್ಯ ಉದ್ದಿಮೆಗಳು ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅನುಷ್ಠಾನಗೊಳಿಸಿದ್ದು, 3044 ವಾಣಿಜ್ಯ ಉದ್ದಿಮೆಗಳು ಇನ್ನೂ ಅನುಷ್ಠಾನಗೊಳಿಸದ ಹಿನ್ನೆಲೆ ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಸಹ ಸೂಚನೆ ನೀಡಿದ್ದಾರೆ.
ಫೆ.29ರಿಂದ ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳನ್ನು ನೀಡಿರುವ ಉದ್ದಿಮೆ ಪರವಾನಿಗೆಗಳನ್ನು ಅಮಾನತುಗೊಳಿಸಲು ಹಾಗೂ ಅಂತಹ ವಾಣಿಜ್ಯ ಉದ್ದಿಮೆಗಳನ್ನು ಬೀಗಮುದ್ರೆ ಹಾಕಲು ಪಾಲಿಕೆಯ ಆರೋಗ್ಯ ವಿಭಾಗದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
Advertisement