ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಇಂದು ಕೂಡ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ಬಜೆಟ್ ಅಧಿವೇಶನದ ಕಾರ್ಯಕಲಾಪಗಳು ಆರಂಭವಾಗುತ್ತಿದ್ದಂತೆಯೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಆಶೋಕ ನೇತೃತ್ವದಲ್ಲಿ ವಿರೋಧ ಪಕ್ಷದ ಶಾಸಕರು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ 48 ಗಂಟೆ ಕಳೆದರೂ ಸರ್ಕಾರ ಈ ವರೆಗೂ ಒಬ್ಬೇ ಒಬ್ಬ ವ್ಯಕ್ತಿಯನ್ನು ಬಂಧಿಸಿಲ್ಲ ಎಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರಕರಣ ಕುರಿತಂತೆ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರೂ ವಿಪಕ್ಷ ಸದಸ್ಯರು ಕೇಳಲಿಲ್ಲ. ಈ ವೇಳೆ ಎದ್ದು ನಿಂತು ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೊದಲಿಗೆ ಸದಸ್ಯರು ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ಕೂತುಕೊಳ್ಳುವಂತೆ ಮನವಿ ಮಾಡಿದರು.
ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ, ಈಗಾಗಲೇ 7 ಜನರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಸಾಬೀತಾದರೆ, ಕೂಗಿದವನನ್ನು ಸಂರಕ್ಷಿಸುವ ಪ್ರಶ್ನೆಯೇ ಉದ್ಭವಿಸಲ್ಲ, ಅವನ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ದೇಶಭಕ್ತಿಯ ಪಾಠವನ್ನು ನಾವು ಬೆಜೆಪಿಯಿಂದ ಕಲಿಯಬೇಕಿಲ್ಲ. ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರಿಗಿಂತ 100 ಪಟ್ಟು ಹೆಚ್ಚು ದೇಶಭಕ್ತರು. ಬಿಜೆಪಿಯವರು ನಮಗೆ ದೇಶಭಕ್ತಿ ಪಾಠ ಹೇಳಿ ಕೊಡಲು ಬರುತ್ತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್. ಆರ್.ಎಸ್.ಎಸ್ 1925ರಲ್ಲೇ ಅಸ್ತಿತ್ವಕ್ಕೆ ಬಂತಲ್ಲ, ಅದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ. ಆರೆಸ್ಸೆಸ್ ಸ್ಥಾಪಕರಾದ ಕೇಶವ ಬಲಿರಾಮ್ ಹೆಡಗೇವಾರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ರಾ? ಮತ್ತೊಬ್ಬ ಸರಸಂಘಚಾಲಕ ಗೋಳ್ವಳ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ರಾ? ಯಾವತ್ತೂ ಇಲ್ಲ ಎಂದು ತಿಳಿಸಿದರು.
ಅನಂತಕುಮಾರ್ ಹೆಗಡೆ ಅವರು ಕೇಂದ್ರ ಸಚಿವರಾಗಿದ್ದಾಗ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಹೇಳಿಕೆ ನೀಡಿದರು. ಇದರ ಬಗ್ಗೆ ಮೋದಿ ಅವರಾಗಲಿ, ಪಕ್ಷದ ಹಿರಿಯರಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದರು.
ಹಿಂದಿನ ಬಿಜೆಪಿ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರು 2023ರ ಫೆಬ್ರುವರಿಯಲ್ಲಿ 3.09 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿದರು. 2024-25ನೇ ಸಾಲಿಗೆ ನಾನು ಮಂಡಿಸಿದ ಆಯವ್ಯಯದ ಗಾತ್ರ 3,71,343 ಕೋಟಿ ರೂ. ನಷ್ಟಿದ್ದು, ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ಗಿಂತ 62,200 ಕೋಟಿ ರೂ. ನಷ್ಟು ಗಾತ್ರ ಹೆಚ್ಚಳವಾಗಿದೆ.
ನಾನು ಜುಲೈ 2023 ರಲ್ಲಿ ಮಂಡಿಸಿದ ಬಜೆಟ್‌ಗಿಂತ ಇದು 43,601 ಕೋಟಿ ರೂ. ಹೆಚ್ಚಳವಾಗಿದೆ. ಅಂತೆಯೇ ರಾಜ್ಯದ ಜಿಡಿಪಿ 25,63,247 ಕೋಟಿ ರೂ. ಇತ್ತು. 2024- 25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ಅಂರೆ 2,41,723 ಕೋಟಿ ರೂ. ಹೆಚ್ಚು. ಅಭಿವೃದ್ಧಿ ಇಲ್ಲದೆ ಆಯವ್ಯಯ ಗಾತ್ರ ಹಾಗೂ ಜಿಡಿಪಿ ಹೆಚ್ಚಳವಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದವರು ಅಭಿವೃದ್ಧಿ ಶೂನ್ಯ ಎಂದಿದ್ದಾರೆ. ಒಟ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ 1,20,000 ಕೋಟಿ ರೂ. ವೆಚ್ಚದ ಹಂಚಿಕೆ ಮಾಡಿದ್ದೇವೆ. 52,009 ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿದ್ದು, ಉಳಿದ ಮೊತ್ತ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಜಿಡಿಪಿ- 2023- 24 ರಲ್ಲಿ 25,63,247 ಕೋಟಿ ರೂ. ಇತ್ತು. 2024- 25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ಅಂದರೆ 2,41,723 ಕೋಟಿ ರೂ. ಹೆಚ್ಚು. ಆದ್ದರಿಂದ ಜಿಡಿಪಿಯೂ ಹೆಚ್ಚಾಗಿದೆ, ಬಜೆಟ್ ಗಾತ್ರವೂ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ವಿರೋಧ ಪಕ್ಷದವರು ಮಾಡಿರುವ ಆಪಾದನೆಯಲ್ಲಿ ಯಾವುದೇ ತಿರುಳಿಲ್ಲ ಎಂಬುದು ಸಾಬೀತಾಗುತ್ತದೆ.
ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 36,000 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ – ಈ ಕಾರ್ಯಕ್ರಮಗಳಿಗೆ 36,000 ಕೋಟಿ ರೂ. ಬಳಸಲಾಗಿದೆ. ಮುಂದಿನ ಬಜೆಟ್ ನಲ್ಲಿ 52,009 ಕೋಟಿ ಒದಗಿಸಿದ್ದು, ಇದರೊಂದಿಗೆ ಶಿಕ್ಷಣ, ಆರೋಗ್ಯ, ರಸ್ತೆಗಳು, ಶಾಂತಿ ಸುವ್ಯವಸ್ಥೆ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಯನ್ನೂ ಮಾಡಿದ್ದೇವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಕ್ಕೆ ಇರುವ ವ್ಯತ್ಯಾಸ ಎಂದು ಹೇಳಿದರು.
Advertisement