
ಬೆಂಗಳೂರು: ಹೊಸ ವರ್ಷಾಚರಣೆ ನಂತರ ಸ್ನೇಹಿತರಿಂದಲೇ 21 ವರ್ಷದ ಯುವಕ ಹತ್ಯೆಗೀಡಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಸೋಮವಾರ ಮುಂಜಾನೆ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 21 ವರ್ಷದ ಯುವಕನೊಬ್ಬ ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಮೃತ ಯುವಕನನ್ನು ವಿಜಯ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ವಿಜಯ್ ವೆಲ್ಡರ್ ಆಗಿದ್ದ ಮತ್ತು ಈತ ಶ್ರೀನಿವಾಸನಗರ ನಿವಾಸಿ ಎನ್ನಲಾಗಿದೆ. ಆರೋಪಿಗಳು ಆತನನ್ನು ಕೊಂದ ನಂತರ ಶವವನ್ನು ಶ್ರೀನಿವಾಸನಗರ ಬಸ್ ನಿಲ್ದಾಣದ ಬಳಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ವಿಜಯ್ ತಮ್ಮ ಸ್ನೇಹಿತರೊಂದಿಗೆ ಶ್ರೀನಿವಾಸನಗರ 80 ಅಡಿ ರಸ್ತೆಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ ಎನ್ನಲಾಗಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಆಟೋದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಗೆಳೆಯರೊಂದಿಗೆ ಜಗಳವಾಗಿದೆ. ಈ ವೇಳೆ ಚಾಕು ಹಿಡಿದುಕೊಂಡಿದ್ದ ಗೆಳೆಯನೊಬ್ಬ ಆತನಿಗೆ ಇರಿದಿದ್ದಾನೆ. ಆರೋಪಿಗಳು ಚಲಿಸುತ್ತಿದ್ದ ಆಟೋದಿಂದ ಆತನನ್ನು ಹೊರಕ್ಕೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅತಿಯಾದ ರಕ್ತಸ್ರಾವದಿಂದ ವಿಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.
Advertisement