ಗಾಡಿ ರಸ್ತೆಗೇ ಇಳಿದಿಲ್ಲ.. ಆದ್ರೂ FASTag ಖಾತೆಯಿಂದ ಹಣ ಕಟ್! ಗೊಂದಲದಲ್ಲಿ ಸವಾರರು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ತ್ವರಿತ ಟೋಲ್ ಪಾವತಿಗಾಗಿ ಚಾಲ್ತಿಗೆ ತಂದಿರುವ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಟ್ಯಾಗ್‌ ಫಾಸ್ಟ್‌ಟ್ಯಾಗ್ ಸೇವೆಯ ಎಡವಟ್ಟುಗಳು ಮುಂದುವರೆದಿದ್ದು, ಸಾಕಷ್ಟು ಸವಾರರು ರಸ್ತೆಗಿಳಿಯದಿದ್ದರೂ FASTag ಖಾತೆಯಿಂದ ಹಣ ಕಡಿತವಾಗಿದೆ.
FASTag ಖಾತೆಯಿಂದ ಹಣ ಕಟ್ (ಸಾಂದರ್ಭಿಕ ಚಿತ್ರ)
FASTag ಖಾತೆಯಿಂದ ಹಣ ಕಟ್ (ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ತ್ವರಿತ ಟೋಲ್ ಪಾವತಿಗಾಗಿ ಚಾಲ್ತಿಗೆ ತಂದಿರುವ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಟ್ಯಾಗ್‌ ಫಾಸ್ಟ್‌ಟ್ಯಾಗ್ ಸೇವೆಯ ಎಡವಟ್ಟುಗಳು ಮುಂದುವರೆದಿದ್ದು, ಸಾಕಷ್ಟು ಸವಾರರು ರಸ್ತೆಗಿಳಿಯದಿದ್ದರೂ FASTag ಖಾತೆಯಿಂದ ಹಣ ಕಡಿತವಾಗಿದೆ.

ಹೌದು.. FASTag ಖಾತೆಯಿಂದ ಹಣ ಕಡಿತವಾಗುತ್ತಿರುವ ಸಾಕಷ್ಟು ವರದಿಗಳು ಬರುತ್ತಿದ್ದು, ಬೆಂಗಳೂರಿನ ಅನೇಕ ವಾಹನ ಬಳಕೆದಾರರು ಈಗ ಆತಂಕಕ್ಕೆ ಕಾರಣರಾಗಿದ್ದಾರೆ. ವಾಹನ ಸವಾರರು ಖಾತೆಯಿಂದ ಹಣ ಕಡಿತವಾದ ದಿನದಂದು ಪ್ರಯಾಣಿಸದಿದ್ದರೂ ಟೋಲ್ ಗೇಟ್‌ಗಳಲ್ಲಿ ತಮ್ಮ ಖಾತೆಗಳಿಂದ ಸಣ್ಣ ಮೊತ್ತದ ಹಣವನ್ನು ಕಡಿತಗೊಳಿಸಲಾಗಿದೆ ಎಂದು ದೂರಿದ್ದಾರೆ. ವಾಹನ ಚಾಲಕರ ಫಾಸ್ಟ್‌ಟ್ಯಾಗ್‌ನಿಂದ ಹಣವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸುವ ಸಂದೇಶ ಬರುತ್ತಿದ್ದು ಇದರಿಂದ ಗ್ರಾಹಕರು ಗೊಂದಲಕ್ಕೀಡಾಗಿದ್ದಾರೆ. 

ಇಂತಹ ಸಂದೇಶಗಳನ್ನು ಸ್ವೀಕರಿಸಿದವರಲ್ಲಿ ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್ ಮ್ಯಾನೇಜರ್ ಅರವಿಂದ್ ಪಿ ಎಸ್ ತಿವಾರಿ ಕೂಡ ಸೇರಿದ್ದು, ತಮ್ಮ ಅನುಭವವನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಹಂಚಿಕೊಂಡಿರುವ ಅವರು, “ನಾನು ಸಾಮಾನ್ಯವಾಗಿ ರಾತ್ರಿ 10 ಗಂಟೆಗೆ ಮಲಗುತ್ತೇನೆ. ಒಂದು ದಿನ, ನನ್ನ ವಾಹನದ ಸಂಖ್ಯೆಯೊಂದಿಗೆ ಐಸಿಐಸಿಐ ಬ್ಯಾಂಕ್ ಫಾಸ್ಟ್ಯಾಗ್ ಹೊಂದಿರುವ ನನ್ನ ವಾಹನ ಸಂಖ್ಯೆಯೊಂದಿಗೆ ರಾತ್ರಿ 11.35 ಕ್ಕೆ Plaza1@km 14825 ನಲ್ಲಿ 30 ರೂ ಪಾವತಿಸಲಾಗಿದೆ ಎಂದು ನನ್ನ ಬ್ಯಾಂಕ್‌ನಿಂದ ಸಂದೇಶ ಬಂದಿದೆ. ಆ ರಾತ್ರಿ ನನ್ನ ವಾಹನವು ಕೆಂಪಾಪುರದ ನನ್ನ ಮನೆಯಲ್ಲಿತ್ತು. ವಾಹನ ರಸ್ತೆಯಲ್ಲಿ ಸಂಚರಿಸಿಯೇ ಇಲ್ಲ ಎಂದರೆ ಹಣ ಕಡಿತವಾಗಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಖಾಸಗಿ ಕಂಪನಿಯೊಂದರ ಹಿರಿಯ ವ್ಯವಸ್ಥಾಪಕ ಕೆ.ಎನ್.ಶಿವರಾಮ ಕೃಷ್ಣ ಅವರು ಕೂಡ ಇಂತಹುದೇ ದೂರು ನೀಡಿದ್ದು, ಕಚೇರಿಗೆ ತೆರಳುತ್ತಿದ್ದಾಗ ಬೆಂಗಳೂರು-ನೆಲಮಂಗಲ ಟೋಲ್ ಪ್ಲಾಜಾದಲ್ಲಿ ಡಿಸೆಂಬರ್ 19 ರಂದು 30 ರೂಪಾಯಿ ಪಾವತಿಸಲಾಗಿದೆ ಎಂಬ ಸಂದೇಶ ಬಂದಿತು. ನನ್ನ ವಾಹನವು ನನ್ನ ಮನೆಯಲ್ಲಿತ್ತು. ಅಬ್ಬಿಗೆರೆ ಟೋಲ್ ನಲ್ಲಿ ಹಣ ಕಡಿತವಾದ ಕುರಿತು ಸಂದೇಶ ಬಂದಿದೆ. ಕೆಲವು ಪ್ಲಾಜಾಗಳು ವಾಹನಗಳನ್ನು ಹಾದುಹೋಗಲು ಅನುಮತಿಸಲು 200 ರೂ ಕಡಿತ ಮಾಡುತ್ತಿವೆ. ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಕಡಿತಗೊಳಿಸಬಹುದೇ ಎಂದು ನಾನು ಚಿಂತಿತನಾಗಿದ್ದೇನೆ. ಈ ಕುರಿತು ನಾನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವೆಬ್‌ಸೈಟ್ ಅನ್ನು ಪರಿಶೀಲಿಸಿದೆ ಮತ್ತು ಸಂದೇಶದ ಸ್ಕ್ರೀನ್‌ಶಾಟ್‌ನೊಂದಿಗೆ ಒಂದು ವಾರದ ಹಿಂದೆ ಅಲ್ಲಿ ನೀಡಲಾದ ಐಡಿಗೆ ಮೇಲ್ ಕಳುಹಿಸಿದೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದು ಕೃಷ್ಣ ಹೇಳಿದರು. 

‘ತಪ್ಪಾದ ಹಣ ಕಡಿತಕ್ಕೆ ಕ್ರಮ': ಅಧಿಕಾರಿಗಳ ಸ್ಪಷ್ಟನೆ
ಇನ್ನು FASTag ಖಾತೆಯಿಂದ ಹಣ ಕಡಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ಬಿಲಾಸ್ ಬ್ರಹ್ಮಂಕರ್ ಅವರು, ತಾಂತ್ರಿಕ ದೋಷದಿಂದಾಗಿ ಇಂತಹ ಸಮಸ್ಯೆಗಳು ನಡೆದಿರಬಹುದು. ಯೋಜನೆಯ ಅನುಷ್ಠಾನದಲ್ಲಿ ಹಲವು ಏಜೆನ್ಸಿಗಳು ಭಾಗಿಯಾಗಿದ್ದವು. ಎನ್‌ಎಚ್‌ಎಐ ಹೊರತುಪಡಿಸಿ, ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಟ್ಯಾಗ್ ಖರೀದಿಸಿದ ಬ್ಯಾಂಕ್‌ಗಳು ಮತ್ತು ಟೋಲ್ ಗೇಟ್‌ನಲ್ಲಿರುವ ಗುತ್ತಿಗೆದಾರರು ಭಾಗಿಯಾಗಿದ್ದಾರೆ. ಜನರು ಸಹಾಯವಾಣಿ ಸಂಖ್ಯೆ 1033 ಗೆ ಕರೆ ಮಾಡಿ ವಿಷಯವನ್ನು ವರದಿ ಮಾಡಬೇಕು ಅಥವಾ helpline1033@ihmcl.com ಗೆ ಇಮೇಲ್ ಮಾಡಬೇಕು. ತಪ್ಪಾಗಿ ಕಡಿತಗೊಂಡ ಹಣವನ್ನು ಖಾತೆಗೆ ಹಿಂತಿರುಗಿಸಲಾಗುತ್ತದೆ ಎಂದು ಅವರು ಹೇಳಿದರು.

ಐಎಚ್‌ಎಂಸಿಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೈಸ್ವಾಲ್ ವಿವೇಕ್ ಮಾತನಾಡಿ, “ಯಾರಾದರೂ ಅಂತಹ ಪರಿಸ್ಥಿತಿಯಲ್ಲಿ 1033 ಗೆ ಕರೆ ಮಾಡಿ. ದೂರುಗಳು ನನ್ನನ್ನು ತಲುಪುತ್ತವೆ. ಅಕ್ರಮ ಕಡಿತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com