ಬೆಂಗಳೂರು: 20 ಅಡಿ ಉದ್ಧದ ಕಬ್ಬಿಣದ ರಾಡ್ ತಲೆಗೆ ಹೊಕ್ಕಿ ಕಾರ್ಮಿಕ ದುರಂತ ಸಾವು

ಕಟ್ಟಡ ಕಾಮಗಾರಿ ವೇಳೆ 20 ಅಡಿ ಉದ್ಧದ ಕಬ್ಬಿಣದ ರಾಡ್ ತಲೆಗೆ ಹೊಕ್ಕಿ ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಟ್ಟಡ ಕಾಮಗಾರಿ ವೇಳೆ 20 ಅಡಿ ಉದ್ಧದ ಕಬ್ಬಿಣದ ರಾಡ್ ತಲೆಗೆ ಹೊಕ್ಕಿ ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ದುರಂತ ಸಂಭವಿಸಿದ್ದು, ತ್ರಿಪುರಾದ ಅಗರ್ತಲಾ ಮೂಲದ 21 ವರ್ಷದ ಕಟ್ಟಡ ಕಾರ್ಮಿಕ ದೀಪಾಂಕರ್ ಚಾಸ ಎಂಬಾತ ದುರಂತ ಸಾವಿಗೀಡಾಗಿದ್ದಾನೆ. ಸುಮಾರು 20 ಅಡಿ ಉದ್ದದ ಕಬ್ಬಿಣದ ರಾಡ್ 100 ಅಡಿ ಮೇಲಿಂದ ಆತನ ಮೇಲೆ ಬಿದ್ದಿದ್ದು ಈ ವೇಳೆ ರಾಡ್ ಆತನ ತಲೆಯೊಳಗೆ ಹೊಕ್ಕಿದೆ. ತೀವ್ರ ರಕ್ತಸ್ರಾವದಿಂದ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ತಲೆಗೆ ಹೊಕ್ಕ ರಾಡ್ ಆತನ ಕಣ್ಣಿನಿಂದ ಹೊರಗೆ ಬಂದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಮೃತ ಕಾರ್ಮಿಕ ಕೆಲವೇ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಕೆಲಸಕ್ಕಾಗಿ ಬಂದಿದ್ದ. ಆತನಿಗೆ ಮದುವೆಯಾಗಿ 8 ತಿಂಗಳ ಗಂಡುಮಗು ಕೂಡ ಇತ್ತು ಎಂದು ಹೇಳಲಾಗಿದೆ. ಮೃತ ಯುವಕನ ಚಿಕ್ಕಪ್ಪ ದುರಂತ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. 

"ಮೇಸ್ತ್ರಿ ಮೊಹಮ್ಮದ್ ಅತ್ತಾವುಲ್ಲಾ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವಿನ ಪ್ರಕರಣವನ್ನು ಶಂಕಿತರ ವಿರುದ್ಧ ದಾಖಲಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಘಟನೆ?
ಮೃತ ಕಾರ್ಮಿಕ ದೀಪಾಂಕರ್ ಚಾಸ ಎಲೆಕ್ಟ್ರಾನಿಕ್ ಸಿಟಿಯ ಹೊಸ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದ ಬಳಿ ವಾಸವಿದ್ದರು. ಆನೇಕಲ್ ತಾಲೂಕಿನ ಕೆ.ಜಿ.ವೀರಸಂದ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕಳೆದ ಆರು ತಿಂಗಳಿಂದ ಕೆಲಸ ಮಾಡುತ್ತಿದ್ದರು. ಅವರ ಚಿಕ್ಕಪ್ಪ, 37 ವರ್ಷದ ಅಭಿಮನ್ಯು ಕೈರಾ ಕೂಡ ಅದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ಸಂಜೆ 4 ರಿಂದ 5 ಗಂಟೆಯ ನಡುವೆ ನಿರ್ಮಾಣ ಹಂತದ ಕಟ್ಟಡದ ಸುಮಾರು 100 ಅಡಿ ಎತ್ತರದ ಮೇಲಿಂದ ಸ್ಕಾಫೋಲ್ಡಿಂಗ್‌ಗೆ ಬಳಸುತ್ತಿದ್ದ 20 ಅಡಿ ಉದ್ಧದ ಕಬ್ಬಿಣದ ರಾಡ್‌ ಆತನ ಮೇಲೆ ಬಿದ್ದಿದೆ.

ಈ ವೇಳೆ ರಾಡ್ ನೇರವಾಗಿ ಆತನ ತಲೆಗೆ ಹೊಕ್ಕಿದೆ. ದುರಂತ ನಡೆದ ಸಂದರ್ಭದಲ್ಲಿ ಕಾರ್ಮಿಕರು ಯಾವುದೇ ರಕ್ಷಣಾ ಉಪಕರಣಗಳನ್ನೂ ಬಳಸುತ್ತಿರಲಿಲ್ಲ ಎಂದು ಹೇಳಲಾಗಿದ್ದು ಇದೇ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.

ಮೃತ ಕಾರ್ಮಿಕ  ಚಾಸಾ ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಮತ್ತು ಆತನಿಗೆ 8 ತಿಂಗಳ 1 ಗಂಟು ಮಗು ಕೂಡ ಇತ್ತು. ಕೆಲಸಕ್ಕಾಗಿ ಈ ಕುಟುಂಬ ಬೆಂಗಳೂರಿಗೆ ಬಂದಿತ್ತು ಎಂದು ಆತನ ಚಿಕ್ಕಪ್ಪ ಕೈರಾ ಅಳಲು ತೋಡಿಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com