ಬೆಂಗಳೂರು: ವೇಶ್ಯಾವಾಟಿಕೆ ದಂಧೆ; ಕಿಂಗ್ ಪಿನ್ ಟರ್ಕಿ ಮಹಿಳೆ ಸೇರಿ 9 ಮಂದಿ ಬಂಧನ

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿದೇಶಿ ಮಹಿಳೆ ಸೇರಿ 9 ಆರೋಪಿಗಳನ್ನು ಪೂರ್ವವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿದೇಶಿ ಮಹಿಳೆ ಸೇರಿ 9 ಆರೋಪಿಗಳನ್ನು ಪೂರ್ವವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಪುಲಕೇಶಿನಗರದಲ್ಲಿ ವಾಸವಾಗಿದ್ದ ಟರ್ಕಿ ದೇಶದ ಬಿಯೋನಾಜ್ ಸ್ವಾಮಿಗೌಡ (39), ಆಕೆಯ ಸಹಚರರಾದ ಒಡಿಶಾದ ಜಿತೇಂದ್ರ ಸಾಹು(43), ಪ್ರಮೋದ್ ಕುಮಾರ್(31), ಮನೋಜ್ ದಾಸ್(23) ಅಸ್ಸಾಂನ ಸೌಮಿತ್ರ ಚಂದ್(26), ಮಹಾಲಕ್ಷ್ಮೀ ಲೇಔಟ್ ನಿವಾಸಿ ಪ್ರಕಾಶ್(32), ಲಗ್ಗೆರೆಯ ವೈಶಾಕ್(22), ಪರಪ್ಪನ ಅಗ್ರಹಾರ ನಿವಾಸಿ ಗೋವಿಂದರಾಜ್(34) ಮತ್ತು ನಂದಿನಿಲೇಔಟ್ ನಿವಾಸಿ ಅಕ್ಷಯ್(32) ಬಂಧಿತರು.

‘ಪ್ರಕರಣದ ಕಿಂಗ್ ಪಿನ್ ಆಗಿರುವ ಬಿಯೋನಾಜ್ 15 ವರ್ಷಗಳ ಹಿಂದೆ ಟರ್ಕಿಗೆ ಬಂದಿದ್ದ ಉದ್ಯಮಿ ರೋಹಿತ್ ಸ್ವಾಮಿಗೌಡ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಬಳಿಕ ಬೆಂಗಳೂರಿಗೆ ಬಂದು ಪೀಣ್ಯದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ರೋಹಿತ್ ಸ್ವಾಮಿಗೌಡ ಮೃತಪಟ್ಟಿದ್ದರು. ನಂತರ ಬಿಯೋನಾಜ್, ಪುಲಕೇಶಿನಗರದಲ್ಲಿ ಎರಡು ಫ್ಲ್ಯಾಟ್ ಖರೀದಿಸಿದ್ದಳು. ಮಧ್ಯವರ್ತಿಗಳ ಮೂಲಕ ವಿದೇಶಿದ ಮಹಿಳೆಯರನ್ನು ಬೆಂಗಳೂರಿಗೆ ಕರೆಸಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2023ರ ಡಿ.19ರಂದು ಹಲಸೂರು ಠಾಣೆ ವ್ಯಾಪ್ತಿಯ ದೊಮ್ಮಲೂರಿನಲ್ಲಿರುವ ದಿ ಲೀಲಾ ಪಾರ್ಕ್ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಹಲಸೂರು ಠಾಣೆ ಇನ್‌ಸ್ಪೆಕ್ಟರ್ ದಾಳಿ ನಡೆಸಿ ಜಿತೇಂದ್ರ ಸಾಹೂ, ಪ್ರಮೋದ್ ಕುಮಾರ್, ಸೌಮಿತ್ರ ಚಂದ್, ಮನೋಜ್‌ನನ್ನು ಬಂಧಿಸಿದ್ದರು. ಬಳಿಕ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬೈಯಪ್ಪನಹಳ್ಳಿ ಠಾಣೆಗೆ ವರ್ಗಾಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ವೈಶಾಕ್ ಎಂಬಾತನನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ ಆರೋಪಿ ವೈಶಾಕ್‌ನ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂನಲ್ಲಿ ‘ಬೆಂಗಳೂರು ಡೇಟಿಂಗ್ ಕ್ಲಬ್’ ಎಂಬ ಗ್ರೂಪ್ ಮೂಲಕ ಗ್ರಾಹಕರನ್ನು ಸೆಳೆದು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ವಿದೇಶಿ ಮಹಿಳೆಯರು ಹಾಗೂ ನೆರೆ ರಾಜ್ಯದ ಮಹಿಳೆಯರನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿರುವುದು ಪತ್ತೆಯಾಗಿತ್ತು.

ಬಳಿಕ ಈ ಮಹಿಳೆಯರ ವಿಚಾರಣೆಯಲ್ಲಿ ಬಿಯೋನಾಜ್ ಸ್ವಾಮಿಗೌಡ ದಂಧೆಯ ರೂವಾರಿ ಎಂಬುದು ಖಾತ್ರಿಯಾಗಿ, ಆಕೆಯನ್ನು ಬಂಧಿಸಲಾಗಿದೆ. ಬಳಿಕ ಈಕೆಯ ವಶದಲ್ಲಿದ್ದ ಖಜಕಿಸ್ತಾನ, ಉಜಕಿಸ್ತಾನ, ಬಾಂಗ್ಲಾದೇಶ, ಉಜ್‌ಬೇಕಿಸ್ತಾನ ದೇಶಗಳ 7 ಮಂದಿ ವಿದೇಶಿ ಮಹಿಳೆಯರನ್ನು ರಕ್ಷಿಸಿ, ಎಲ್ಲರನ್ನು ವಿದೇಶಿ ಪ್ರಾದೇಶಿಕ ನೊಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳ ಮುಂದೆ ಹಾಜರು ಪಡಿಸಲಾಗಿದೆ.

ಈ ಪೈಕಿ ಇಬ್ಬರ ವಿರುದ್ಧ ಪಾಸ್‌ಪೋರ್ಟ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಇತರೆ ಇಬ್ಬರಿಗೆ ನೋಟಿಸ್ ನೀಡಿದ್ದು, ಮಹಿಳೆಯರು ಸದ್ಯದಲ್ಲೇ ತಮ್ಮ ದೇಶಕ್ಕೆ ತೆರಳಿದ್ದಾರೆ. ಇನ್ನು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮೂಲದ ಮಹಿಳೆಯರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com