ಬೆಂಗಳೂರು: ಗಣರಾಜ್ಯೋತ್ಸವ ನಿಮಿತ್ತ ರಾಜಧಾನಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಸಕಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಜನರ ಸ್ವಾಗತಕ್ಕೆ ಲಾಲ್ ಬಾಗ್ ಸಜ್ಜಾಗಿದೆ.
ಈ ಬಾರಿಯ ಗಣರಾಜ್ಯೋತ್ಸವದಂದು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು 215ನೇ ಆವೃತ್ತಿಯ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ರಾರಾಜಿಸಲಿದ್ದಾರೆ. ಪ್ರದರ್ಶನಕ್ಕೆ ಭೇಟಿ ನೀಡುವವರನ್ನು 32 ಲಕ್ಷ ಹೂವುಗಳು ಮತ್ತು 68 ಪ್ರಭೇದಗಳ ಸಸ್ಯಗಳೊಂದಿಗೆ ರಚಿಸಲಾದ ತತ್ವಜ್ಞಾನಿ-ಕವಿಯ ಪ್ರತಿಮೆಯಿಂದ ಸ್ವಾಗತಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ಶಾಮಲಾ ಇಕ್ಬಾಲ್ ಮಾತನಾಡಿದ್ದು, ಬಸವಣ್ಣನವರ ಪ್ರತಿಮೆಯ ಜೊತೆಗೆ ಅನುಭವ ಮಂಟಪ (ಸಂಸತ್ತು) ಹೂವಿನ ಪ್ರತಿಕೃತಿಗಳು ಮತ್ತು 10 ಅಡಿ ಎತ್ತರದ ಬಸವಣ್ಣನವರ ವಚನ ಬರೆಯುವ ಭಂಗಿಯನ್ನು ಪ್ರದರ್ಶಿಸಲಾಗಿದೆ. 11 ದಿನಗಳ ಕಾಲ ನಡೆಯುವ ಈ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಲಿದ್ದಾರೆ. ಅನುಭವ ಮಂಟಪವು 34 ಅಡಿ ಅಗಲ ಮತ್ತು 30 ಅಡಿ ಎತ್ತರದ ಮೂರು ಬಣ್ಣಗಳ 1.5 ಲಕ್ಷ ಕತ್ತರಿಸಿದ ಗುಲಾಬಿಗಳು, ಹಳದಿ, ಗುಲಾಬಿ ಮತ್ತು ಬಿಳಿ ಬಣ್ಣದ ಸೇವಂತಿಗೆ ಹೂವುಗಳು ಮತ್ತು 1.85 ಲಕ್ಷ ಗಾಂಫ್ರಿನಾ ಹೂವುಗಳಿಂದ ರಚಿಸಲಾಗಿದೆ. ತಾಜಾತನ ಮತ್ತು ನೋಟವನ್ನು ಉಳಿಸಿಕೊಳ್ಳಲು ಹೂವುಗಳನ್ನು ಆರು ದಿನಗಳ ನಂತರ ಬದಲಾಯಿಸಲಾಗುತ್ತದೆ. 10x10 ಅಡಿ ಅಗಲ ಮತ್ತು 16 ಅಡಿ ಎತ್ತರದ ಐಕ್ಯ ಮಂಟಪದ ಮಾದರಿಯು ಮತ್ತೊಂದು ಆಕರ್ಷಣೆಯಾಗಿದ್ದು, ಗುಲಾಬಿ ಮತ್ತು ಮಾರಿಗೋಲ್ಡ್‌ಗಳಂತಹ 3.5 ಲಕ್ಷ ಹೂವುಗಳಿಂದ ನಿರ್ಮಿಸಲಾಗಿದೆ ಎಂದರು.
ಅಂತೆಯೇ ಅಕ್ಕ ಮಹಾದೇವಿ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಕುಂಬಾರ ಗುಂಡಣ್ಣ ಮತ್ತಿತರರ ಮೂರ್ತಿಗಳು, ಅವರ ಕಲಾಕೃತಿಗಳ ಮಾಹಿತಿಯೊಂದಿಗೆ ಪ್ರದರ್ಶನಗೊಳ್ಳಲಿವೆ. ಸಂಘಟಕರು 1.5 ಲಕ್ಷ ಗಿಡಗಳನ್ನು ಬಳಸಿ ಇಷ್ಟಲಿಂಗ ಕಲಾಕೃತಿಯನ್ನೂ ರೂಪಿಸಿದ್ದಾರೆ ಎಂದರು.
ತೋಟಗಾರಿಕೆ ನಿರ್ದೇಶಕ ರಮೇಶ್ ಡಿ ಎಸ್ ಮಾತನಾಡಿ, ಬಸವಣ್ಣನ ಪ್ರತಿಮೆಗೆ 32 ಲಕ್ಷ ಹೂವು ಮತ್ತು ಗಿಡಗಳನ್ನು ಬಳಸಲಾಗಿದೆ. ಹೈಬ್ರಿಡ್ ಹೂವುಗಳನ್ನು ತೈವಾನ್, ಥೈಲ್ಯಾಂಡ್ ಮತ್ತು ದಕ್ಷಿಣ ಅಮೆರಿಕಾದಿಂದ ತರಿಸಿಕೊಳ್ಳಲಾಗಿದೆ. 2.85 ಕೋಟಿ ಬಜೆಟ್‌ನಲ್ಲಿ ಪ್ರದರ್ಶನ ನಡೆಯಲಿದೆ. ಸುಮಾರು 10 ಲಕ್ಷ ಜನರು ಬರುವ ನಿರೀಕ್ಷೆಯಲ್ಲಿದ್ದೇವೆ ಮತ್ತು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉದ್ಯಾನದಲ್ಲಿ 15 ಜೇನುಗೂಡುಗಳಿವೆ ಮತ್ತು ಆ ಪ್ರದೇಶಗಳಿಗೆ ಸಂದರ್ಶಕರನ್ನು ನಿರ್ಬಂಧಿಸಲು ಭದ್ರತೆಯನ್ನು ನಿಯೋಜಿಸಲಾಗಿದೆ ಎಂದರು.
ಉಳಿದಂತೆ ಫಲಪುಷ್ಪ ಪ್ರದರ್ಶನದ ಟಿಕೆಟ್ ದರಗಳು ವಾರದ ದಿನಗಳಲ್ಲಿ 80 ರೂಗಳಾಗಿರಲಿದ್ದು, ವಾರಾಂತ್ಯದಲ್ಲಿ 100 ರೂ ಇರಲಿದೆ. 12 ವರ್ಷದೊಳಗಿನ ಮಕ್ಕಳಿಗೆ 30 ರೂ ಪ್ರವೇಶ ಶುಲ್ಕ ಇರಲಿದ್ದು, ಸಮವಸ್ತ್ರದಲ್ಲಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಲಾಲ್ ಬಾಗ್‌ನ 300 ಸ್ಥಳಗಳಲ್ಲಿ ಬಸವಣ್ಣ ಮತ್ತು ಅವರ ಅನುಯಾಯಿಗಳ ಆಯ್ದ 300 ವಚನಗಳನ್ನು ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರದರ್ಶನ ಸಮಯ: ಬೆಳಗ್ಗೆ 6 ರಿಂದ ಸಂಜೆ 6.30
Advertisement