ನಗರದಲ್ಲಿ ಅಕ್ರಮ ಜಾಹೀರಾತು ಅಳವಡಿಕೆ: ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಬೆಂಗಳೂರಿನಲ್ಲಿ ಅಕ್ರಮವಾಗಿ ಹಾಕಲಾಗಿರುವ ಜಾಹೀರಾತು ಫಲಕ/ಹೋರ್ಡಿಂಗ್‌ಗಳ ತೆರವು ಮಾಡುವುದು ಮತ್ತು ಹೊಸದಾಗಿ ಜಾಹೀರಾತು ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ವರದಿ ಸಲ್ಲಿಸುವಂತೆ ಗುರುವಾರ ಹೈಕೋರ್ಟ್‌ ಬಿಬಿಎಂಪಿಗೆ ಗುರುವಾರ ನಿರ್ದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ಹಾಕಲಾಗಿರುವ ಜಾಹೀರಾತು ಫಲಕ/ಹೋರ್ಡಿಂಗ್‌ಗಳ ತೆರವು ಮಾಡುವುದು ಮತ್ತು ಹೊಸದಾಗಿ ಜಾಹೀರಾತು ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ವರದಿ ಸಲ್ಲಿಸುವಂತೆ ಗುರುವಾರ ಹೈಕೋರ್ಟ್‌ ಬಿಬಿಎಂಪಿಗೆ ಗುರುವಾರ ನಿರ್ದೇಶಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಯನ್ನು ಆಕ್ಷೇಪಿಸಿ ಬೆಂಗಳೂರಿನ ಮಾಯಿಗೇಗೌಡ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಏನಾದರು ಕ್ರಮಕೈಗೊಳ್ಳಲಾಗಿದೆಯೇ ಅಥವಾ ಆ ಸಂಬಂಧ ಪ್ರಸ್ತಾವ ಇದೆಯೇ ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು.

“ಅರ್ಜಿದಾರರು ಜಾಹೀರಾತು ಫಲಕ ಮತ್ತು ಹೋರ್ಡಿಂಗ್‌ ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಮೆಮೊ ಸಲ್ಲಿಸಿದ್ದಾರೆ. ಈ ಸಂಬಂಧ ಪೂರ್ವಾನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದೂ ಸೇರಿ ಹಿಂದಿನ ನಮ್ಮ ಆದೇಶಗಳಿಗೆ ಪ್ರತಿಕ್ರಿಯೆ ಸಲ್ಲಿಸಬೇಕು… ಬಿಬಿಎಂಪಿಯು ಯಾವ ಕ್ರಮಕೈಗೊಂಡಿದೆ. ಕ್ರಮಕೈಗೊಳ್ಳದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ. ಅಕ್ರಮ ಜಾಹೀರಾತು ಅಳವಡಿಸಿರುವ ಮಾಹಿತಿಯನ್ನು ವ್ಯಾಪ್ತಿ ಹೊಂದಿದ ಪೊಲೀಸರಿಗೆ ತಿಳಿಸಿರುವುದಕ್ಕೆ ಅವರು ಕೈಗೊಂಡಿರುವ ಕ್ರಮವನ್ನು ತಿಳಿಸಬೇಕು” ಎಂದು ಆದೇಶದಲ್ಲಿ ಹೇಳಿದೆ.

ಬಿಬಿಎಂಪಿಯ ಅನುಮತಿ ಪಡೆಯದೆ ಮತ್ತು ಶುಲ್ಕ ಪಾವತಿಸದೇ ಅಕ್ರಮ ಜಾಹೀರಾತು/ಹೋರ್ಡಿಂಗ್‌ಗಳನ್ನು ಅಳವಡಿಸಿದ್ದರೆ ತಪ್ಪತಸ್ಥ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಸೂಕ್ತ ಆದೇಶ ಹೊರಡಿಸಲಾಗುವುದು. ಇದರಲ್ಲಿ ದುಬಾರಿ ದಂಡ ಅಥವಾ ವ್ಯಾಪ್ತಿ ಹೊಂದಿದ ಪೊಲೀಸರಿಗೆ ಪ್ರಕರಣದ ದಾಖಲಿಸಲು ಸೂಚಿಸಲಾಗುವುದು ಎಂದೂ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ನ್ಯಾಯಾಲಯ ಹಲವು ಆದೇಶ ಮಾಡಿರುವ ಹೊರತಾಗಿಯೂ ಅಕ್ರಮ ಜಾಹೀರಾತು ಹಾವಳಿ ತಪ್ಪಿಲ್ಲ. ಅಕ್ರಮ ಜಾಹೀರಾತು ಮತ್ತು ಹೋರ್ಡಿಂಗ್‌ಗಳನ್ನು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದು, ಇದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ” ಎಂದು ಪೀಠದ ಗಮನಸೆಳೆದರು.

ಆಗ ಪೀಠವು 2023ರ ಆಗಸ್ಟ್‌ 2ರಂದು ಅಕ್ರಮವಾಗಿ ಅಳವಡಿಸಿರುವ ಜಾಹೀರಾತು/ಹೋರ್ಡಿಂಗ್‌/ಫ್ಲೆಕ್ಸ್‌ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವ ತನ್ನ ಆದೇಶವನ್ನು ನೆನಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com