ರಾಮಲಲ್ಲಾ ವಿಗ್ರಹದ ಶಿಲೆ, ರಾಮ ಮಂದಿರದ ಕಲ್ಲು, ಆಯ್ಕೆ ಮಾಡಿದ್ದೇ ಕೆಜಿಎಫ್‌ ವಿಜ್ಞಾನಿಗಳು!

ರಾಮಲಲ್ಲಾ ವಿಗ್ರಹ ಕೆತ್ತನೆಗೆ ಯಾವ ಕಲ್ಲನ್ನು ಬಳಸಬೇಕು, ಯಾವ ಗುಣಮಟ್ಟದ ಶಿಲೆಯನ್ನು ಬಳಸಬೇಕು ಮತ್ತು ಯಾವ ಕಲ್ಲಿನಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎನ್ನುವುದನ್ನು ಅಂತಿಮಗೊಳಿಸಿದ್ದು ಚಿನ್ನದ ನಾಡು ಕೋಲಾರದ ವಿಜ್ಞಾನಿಗಳು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೋಲಾರ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಟಾಪನೆಯಾಗಿರುವ ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಆಗಿದ್ದರು, ರಾಮಲಲ್ಲಾ ವಿಗ್ರಹ ಕೆತ್ತನೆಗೆ ಯಾವ ಕಲ್ಲನ್ನು ಬಳಸಬೇಕು, ಯಾವ ಗುಣಮಟ್ಟದ ಶಿಲೆಯನ್ನು ಬಳಸಬೇಕು ಮತ್ತು ಯಾವ ಕಲ್ಲಿನಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎನ್ನುವುದನ್ನು ಅಂತಿಮಗೊಳಿಸಿದ್ದು ಚಿನ್ನದ ನಾಡು ಕೋಲಾರದ ವಿಜ್ಞಾನಿಗಳು.

ರಾಮ ಜನ್ಮಭೂಮಿ ಟ್ರಸ್ಟ್ ನೀಡಿದ ಗುತ್ತಿಗೆ ಅನ್ವಯ ದೇವಾಲಯಕ್ಕೆ ಬಳಸಲಾಗಿರುವ ವಿವಿಧ ರೀತಿಯ ಕಲ್ಲುಗಳ ಗುಣಮಟ್ಟದ ತಪಾಸಣೆಯ ಸವಾಲಿನ ಕೆಲಸವನ್ನು ಕೇಂದ್ರ ಸರ್ಕಾರದ ಗಣಿ ಖಾತೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್‌ನ (ಎನ್‌ಐಆರ್‌ಎಂ) ಸಮರ್ಪಕವಾಗಿ ನಿರ್ವಹಿಸಿದೆ.

ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರು ಎನ್‌ಐಆರ್‌ಎಂನಿಂದ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಿಬ್ಬಂದಿಯನ್ನು ಆಯ್ಕೆ ಮಾಡಿದರು. ಆರಂಭದಲ್ಲಿ, ಆನ್‌ಲೈನ್ ಸಭೆಗಳನ್ನು ನಡೆಸಲಾಗಿದೆ, ನಂತರ ಟ್ರಸ್ಟ್ ಸದಸ್ಯರು ಅಯೋಧ್ಯೆಯಲ್ಲಿ ವಿಜ್ಞಾನಿ ಡಾ ರಾಜನ್ ಬಾಬು ನೇತೃತ್ವದ ಎನ್‌ಐಆರ್‌ಎಂ ತಂಡವನ್ನು ಭೇಟಿ ಮಾಡಿದ್ದಾರೆ.

ಇದೀಗ ರಾಮ ಮಂದಿರಕ್ಕೆ ಬಳಸಲಾಗಿರುವ ಎಲ್ಲಾ ಕಲ್ಲುಗಳನ್ನು ರಾಜ್ಯದ ವಿಜ್ಞಾನಿಗಳು ಎರಡು ಬಾರಿ ಪರೀಕ್ಷೆ  ನಡೆಸಿದ್ದಾರೆ. ಇವರ ಪ್ರಮಾಣೀಕರಣದ ನಂತರವೇ ಆ ಕಲ್ಲುಗಳನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ತಿಳಿದುಬಂದಿದೆ.

ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿರುವ NIRMನ ಪ್ರಧಾನ ವಿಜ್ಞಾನಿ ಡಾ.ರಾಜನ್ ಬಾಬು ಅವರು ರಾಮ ಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ಭಾಗಿಯಾದವರಾಗಿದ್ದಾರೆ. ದೇವಾಲಯದ ಅಡಿಗಲ್ಲಿನಿಂದ ಹಿಡಿದು ದೇವಾಲಯದ ವಿನ್ಯಾಸಕ್ಕೆ ಬಳಸಲಾಗಿರುವ ಶಿಲೆ, ನೆಲಹಾಸಿಗೆಗೆ ಬಳಸಲಾಗಿರುವ ಕಲ್ಲು, ಅಲ್ಲದೆ, ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಲಾಗಿರುವ ಶಿಲೆಯನ್ನು ಇವರೇ ಪರೀಕ್ಷೆ ನಡೆಸಿದ್ದಾರೆ.

ದೇವಸ್ಥಾನದ ಅಡಿಪಾಯಕ್ಕೆ ಶೇ 65 ರಷ್ಟು ಕಲ್ಲುಗಳನ್ನು ಸಾಗರಹಳ್ಳಿ, ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರದಿಂದ ಬಳಸಿಕೊಳ್ಳಲಾಗಿದ್ದು, ಉಳಿದ ಕಲ್ಲುಗಳನ್ನು ಕರೀಂ ನಗರ್, ವಾರಂಗಲ್ ಮತ್ತು ಒಂಗೋಲ್‌ನಿಂದ ಬಳಸಿಕೊಳ್ಳಲಾಗಿದೆ. ನೆಲಹಾಸಿಗೆಗೆ ರಾಜಸ್ಥಾನದ ಮಕ್ರಾನಾ ಮಾರ್ಬಲ್​ ಕಲ್ಲುಗಳನ್ನು ಬಳಸಲಾಗಿದೆ. ಇನ್ನು ದೇವಾಲಯದ ಗೋಡೆ ಹಾಗೂ ವಿನ್ಯಾಸಕ್ಕಾಗಿ ಬಯಾನದ ಸ್ಯಾಂಡ್ ಸ್ಟೋನ್​​ಗಳನ್ನು ಬಳಸಲಾಗಿದೆ. ಪ್ರಮುಖವಾಗಿ ರಾಮಲಲ್ಲಾ ವಿಗ್ರಹ ಕೆತ್ತನೆಗಾಗಿ ಮೈಸೂರಿನ ಹೆಗ್ಗಡದೇವನಕೋಟೆಯ ಕರಿಯ ಶಿಲೆಯ ಕಲ್ಲನ್ನು ಬಳಕೆ ಮಾಡಲಾಗಿದೆ ಎಂದು ಡಾ ರಾಜನ್ ಬಾಬು ಅವರು ಮಾಹಿತಿ ನೀಡಿದ್ದಾರೆ.

ಇನ್ನು ದೇವಾಲಯದ ನಿರ್ಮಾಣಕ್ಕಾಗಿ ಗುಣಮಟ್ಟದ ಕಲ್ಲನ್ನು ಹೊರತುಪಡಿಸಿ ಇನ್ಯಾವುದೇ ವಸ್ತುಗಳನ್ನು ಬಳಕೆ ಮಾಡಿಲ್ಲ. ಕಲ್ಲಿನಿಂದ ಕಲ್ಲಿಗೆ ಇಂಟರ್​ ಲಾಕಿಂಗ್ ಸಿಸ್ಟ್ಂ ಬಳಕೆ ಮಾಡಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಹಾಗಾಗಿ ದೇವಾಲಯಕ್ಕೆ ಒಂದು ಸಾವಿರ ವರ್ಷ ಆಯಸ್ಸು ಇರುತ್ತದೆ. ಸಿಡಿಲು, ಗುಡುಗು, ಮಳೆ ಹಾಗೂ ಭೂಕಂಪನವಾದರೂ ದೇವಾಲಯಕ್ಕೆ ಯಾವುದೇ ಹಾನಿಯಾಗದಂತೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಲ್ಲಿನ ಎಲ್ಲ ಗುಣಗಳನ್ನು ಅರಿಯಲು ದೇಶದಾದ್ಯಂತ ಹಲವು ಕ್ವಾರಿಗಳಿಗೆ ಭೇಟಿ ನೀಡಲಾಗಿತ್ತು. ಅಡಿಪಾಯಕ್ಕೆ ಗ್ರಾನೈಟ್ ಸೂಕ್ತ ಎಂಬ ಅಭಿಪ್ರಾಯ ಬಂದಿತು. ಸೂಪರ್ ಸ್ಟ್ರಕ್ಚರ್‌ಗೆ ಸ್ಟ್ಯಾಂಡ್‌ ಸ್ಟೋನ್‌ ಬಳಸಲಾಗಿದೆ. ಆಲಂಕಾರಿಕ ಶಿಲೆಗಾಗಿ ಮಕ್ರಾನ್‌ ಅಮೃತ ಶಿಲೆ ಬಳಸಲು ಶಿಫಾರಸು ಮಾಡಲಾಗಿತ್ತು. ಅದೇ ರೀತಿ ದೇವಾಲಯ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com