ಇನ್ಮುಂದೆ ಕೌನ್ಸಿಲಿಂಗ್​ ಮೂಲಕವೇ ಸಬ್​ ರಿಜಿಸ್ಟ್ರಾರ್ ವರ್ಗಾವಣೆ: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

ಈ ಹುದ್ದೆಗಳ ಪೋಸ್ಟಿಂಗ್‌ನಲ್ಲಿ ಕೋಟ್ಯಾಂತರ ವ್ಯವಹಾರದ ದೊಡ್ಡ ದಂಧೆಯೇ ನಡೆಯುತ್ತಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸಂಪುಟ ಸಭೆ
ಸಂಪುಟ ಸಭೆ

ಬೆಂಗಳೂರು: ಕಂದಾಯ ಇಲಾಖೆ ಶುದ್ಧೀಕರಣದ ಭಾಗವಾಗಿ ಆಯಕಟ್ಟಿನ ಜಾಗಗಳಲ್ಲಿ ಉಳಿದಿರುವ ಸಬ್‌ ರಿಜಿಸ್ಟ್ರಾರ್‌ಗಳ ಎತ್ತಂಗಡಿಗೆ ರಾಜ್ಯ ಸಚಿವ ಸಂಪುಟ ದಿಟ್ಟ ತೀರ್ಮಾನ ಕೈಗೊಂಡಿದೆ.

ಈ ಹುದ್ದೆಗಳ ಪೋಸ್ಟಿಂಗ್‌ನಲ್ಲಿ ಕೋಟ್ಯಾಂತರ ವ್ಯವಹಾರದ ದೊಡ್ಡ ದಂಧೆಯೇ ನಡೆಯುತ್ತಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಇದುವರೆಗೂ ನೇರವಾಗಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಮಾಡಲಾಗುತ್ತಿತ್ತು. ಇದನ್ನು ಬದಲಿಸಲಾಗಿದ್ದು, ಈಗಿನಿಂದಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ. ಅಕ್ರಮ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವರ್ಗಾವಣೆಗೆ ಹೊಸ ನೀತಿ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಬೆಂಗಳೂರು ಸುತ್ತಮುತ್ತ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗಳಲ್ಲಿ ಕಳೆದ 8 ವರ್ಷಗಳ ಅವಧಿಯಲ್ಲಿ 5 ವರ್ಷ ಉಪ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿ, ಕೇಂದ್ರ ಕಚೇರಿ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕರನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಬಿಎಂಆರ್‌ಡಿಎ ವ್ಯಾಪ್ತಿಯ ಹೊರಗಿನ 10 ನಗರಸಭೆಗಳ ವ್ಯಾಪ್ತಿಯ ತಾಲೂಕುಗಳಲ್ಲಿ ಕಳೆದ 5 ವರ್ಷಗಳಲ್ಲಿ 4 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡುತ್ತಿರುವ ಈ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗುತ್ತಿದೆ.

ಸಂಪುಟ ಸಭೆ
ಹೊಸ ನೀತಿ: ಅಧಿಕಾರಿಗಳು ಕಾನೂನು ಪಾಲನೆ ಮಾಡದಿದ್ದರೆ, ಸರ್ಕಾರಕ್ಕೆ ತಪ್ಪು ಸಲಹೆ ನೀಡಿದ್ರೆ ಕಠಿಣ ಕ್ರಮ!

ಭೂಮಿ ಮೌಲ್ಯ ದುಬಾರಿಯಾಗಿರುವ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಅಕ್ರಮ ಭೂ ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳಿವೆ. ನೋಂದಣಿ ಇಲಾಖೆ ವರ್ಗಾವಣೆಯಲ್ಲಿ ಪಾರದರ್ಶಕತೆಗಾಗಿ ಕೌನ್ಸೆಲಿಂಗ್‌ ಪದ್ಧತಿ ಜಾರಿ ಮಾಡಲು ಸಂಪುಟ ತೀರ್ಮಾನಿಸಿದ್ದು, ಅದಕ್ಕಾಗಿ ಈಗಾಗಲೇ ಹೊರಡಿಸಲಾಗಿರುವ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಯಲ್ಲಿ ಶೇಕಡಾವಾರು ಮಿತಿ ಮತ್ತು ಅವಧಿಯನ್ನು ಸಡಿಲಗೊಳಿಸಲು ನಿರ್ಣಯಿಸಲಾಗಿದೆ. ಆ.10ರವರೆಗೆ ಈ ವರ್ಗಾವಣೆಗಳು ನಡೆಯಲಿವೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಸಬ್‌ ರಿಜಿಸ್ಟ್ರಾರ್‌, ಹಿರಿಯ ಸಬ್‌ ರಿಜಿಸ್ಟ್ರಾರ್‌ಗಳನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಪ್ರಥಮ ದರ್ಜೆ ಸಹಾಯಕರ ವರ್ಗಾವಣೆಯನ್ನು ಮುಂದಿನ ವರ್ಷ ಮಾಡಲಾಗುವುದು. ಈ ಮೂಲಕ ಬಹಳ ವರ್ಷಗಳಿಂದ ಬೆಂಗಳೂರು ಸುತ್ತಮುತ್ತಲ ಕಚೇರಿಗಳಲ್ಲಿರುವ ಅಧಿಕಾರಿಗಳನ್ನು ಹೊರಗೆ ಕಳಿಸಲಾಗುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿನ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ದಿ ಸಹಾಯಕರು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ನಿಯಂತ್ರಣ ನಿಯಮಗಳು -2024ಕ್ಕೆ ಅನುಮೋದನೆ ನೀಡಲಾಗಿದೆ. ಕೌನ್ಸೆಲಿಂಗ್‌ ಮೂಲಕ ಈ ವರ್ಗಾವಣೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಪಂಚಾಯತ್‌ರಾಜ್‌ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವಹಿಸಲು ನ್ಯಾಯಮೂರ್ತಿ ಕೆ ಭಕ್ತವತ್ಸಲ ಆಯೋಗ ಮಾಡಿದ್ದ ಶಿಫಾರಸನ್ನು ಕೈಬಿಟ್ಟು, ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಲು ಸಂಪುಟ ನಿರ್ಧರಿಸಿದೆ.

ಅಂದರೆ ಪಂಚಾಯಿತಿಗಳ ಚುನಾವಣೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಗರಾಭಿವೃದ್ಧಿ ಇಲಾಖೆ ಮೂಲಕವೇ ನಿರ್ವಹಿಸುವ ವ್ಯವಸ್ಥೆ ಮುಂದುವರಿಯಲಿದೆ.

ಸಂಪುಟ ಸಭೆ
ಮುಡಾ ಹಗರಣ ಸಿಬಿಐಗೆ ಕೊಡುವ ಪ್ರಕರಣವೇ ಅಲ್ಲ: ಸಿಎಂ ಸಿದ್ದರಾಮಯ್ಯ

ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಇಂತಿವೆ...

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (ಡಿಸಿಎಫ್‌) ವೃಂದದ ಮುಂಬಡ್ತಿಗೆ ನಿಗದಿಪಡಿಸಿರುವ ಕನಿಷ್ಠ ಅರ್ಹತಾ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸುವ ಉದ್ದೇಶದ ತಿದ್ದುಪಡಿ ನಿಯಮಗಳಿಗೆ ಸಂಪುಟ ಅನುಮೋದನೆ ನೀಡಿತು. 50ಕ್ಕೂ ಹೆಚ್ಚು ಡಿಸಿಎಫ್‌ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಸಂಪುಟ ಈ ತೀರ್ಮಾನ ಮಾಡಿದೆ.

ಕರ್ನಾಟಕ ಗಣಿ ಪರಿಸರ ಪುನರ್ವಸತಿ ನಿಗಮದಿಂದ (ಕೆಎಂಇಆರ್‌ಸಿ) ಗಣಿಗಾರಿಕೆ ವಲಯದಲ್ಲಿ (ಸಿಇಪಿಎಂಐಝ್) ಸಮಗ್ರ ಪರಿಸರ ಯೋಜನೆಯಡಿ ಯೋಜನೆಗಳನ್ನು ಮಂಜೂರು ಮಾಡಲು ಮತ್ತು ಅನುಷ್ಠಾನಗೊಳಿಸಲು ಕೆಯುಐಡಿಎಫ್‌ಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲು ಮತ್ತು ಯೋಜನೆಗಳ ಅನುಷ್ಠಾನಕ್ಕಾಗಿ ಅಧಿಕಾರ ಸಮಿತಿಯನ್ನು ರಚಿಸಲು ಸಂಪುಟ ಅನುಮೋದನೆ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 563 ನಗರ ಆರೋಗ್ಯ ಕ್ಷೇಮ ಕೇಂದ್ರಗಳಿಗೆ (ನಮ್ಮ ಕ್ಲಿನಿಕ್‌) ಪ್ರಯೋಗಾಲಯಗಳನ್ನು ಬಲಪಡಿಸಲು 53.66 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಉಪಕರಣ, ಔಷಧ ಮತ್ತಿತರ ಸಾಮಗ್ರಿ ಖರೀದಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು.

ಆನೇಕಲ್‌, ಹೊಸಕೋಟೆ, ಖಾನಾಪುರ, ನೆಲಮಂಗಲ, ಶಿರಹಟ್ಟಿ, ಶೃಂಗೇರಿ ಮತ್ತು ಯಳಂದೂರು ತಾಲೂಕುಗಳ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 256.15 ಕೋಟಿ ರೂ. ವೆಚ್ಚ ಮಾಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿತು. ನಬಾರ್ಡ್‌ ಯೋಜನೆಯಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಗ್ರಾಮೀಣ ಆರೋಗ್ಯ ವ್ಯವಸ್ಥೆ ಬಲಪಡಿಸಲು ಒಟ್ಟು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ ನೀಡಿದೆ.

ಕೆಜಿಐಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018-20 ದ್ವೈವಾರ್ಷಿಕ ಅವಧಿಗೆ ಪ್ರತಿ ಸಾವಿರ ರೂ.ಗೆ ಪ್ರತಿ ವರ್ಷಕ್ಕೆ 80 ರೂ. ಮಧ್ಯಂತರ ಲಾಭಾಂಶ ಘೋಷಣೆ ಮಾಡಲು ಸಂಪುಟ ನಿರ್ಧರಿಸಿತು.

ಒಳನಾಡು ಕೆರೆ, ಜಲಾಶಯಗಳಲ್ಲಿ ಮೀನು ಸಾಕಾಣಿಕೆ ಸಂಬಂಧ 2023 -24ನೇ ಸಾಲಿನಲ್ಲಿ ಟೆಂಡರ್‌/ಗುತ್ತಿಗೆ ನವೀಕರಿಸಿಕೊಂಡಿರುವರಿಗೇ ಮತ್ತೊಂದು ವರ್ಷ ಗುತ್ತಿಗೆ ಅವಧಿ ಮುಂದುವರಿಸಲು ಸಂಪುಟ ನಿರ್ಧರಿಸಿದೆ. 2,970 ಕೆರೆಗಳಲ್ಲಿ ಮೀನು ಕೃಷಿಕರು ಕಳೆದ ಸಾಲಿನಲ್ಲಿ ಗುತ್ತಿಗೆ ನವೀಕರಿಸಿಕೊಂಡಿದ್ದರು ಮತ್ತು ಸರಕಾರಕ್ಕೆ 22.06 ಕೋಟಿ ರೂ. ಗುತ್ತಿಗೆ ಮೊತ್ತ ಪಾವತಿಯಾಗಿತ್ತು.

ಇಂದಿರಾ ಕ್ಯಾಂಟೀನ್‌ಗಳ ಹೊಸ ಮೆನುವಿನಂತೆ ಅಡುಗೆ ಉಪಕರಣ ಹಾಗೂ ಪೀಠೋಪಕರಣಗಳನ್ನು ಖರೀದಿಸಲು ಒಟ್ಟು 84.58 ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಡಾ. ಜಸ್ಟೀಸ್ ಕೆ ಭಕ್ತವತ್ಸಲ ಆಯೋಗವು ಮಾಡಿರುವ ಶಿಫಾರಸ್ಸನ್ನು ಕೈಬಿಡುವ ಹಾಗೂ ಹಾಲಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಸಂಖ್ಯೆ: ಹಿಂವಕ 114 ಬಿಸಿಎ 2022 (ಭಾ-1) ದಿನಾಂಕ: 04.11.2023 ರಲ್ಲಿ ಜಾರಿಗೊಳಿಸಿರುವ 03 ಶಿಫಾರಸ್ಸುಗಳ ಪೈಕಿ "To bring all urban and Local Bodies Election wing under the control of DPAR" ಎಂಬ ಶಿಫಾರಸ್ಸನ್ನು ಕೈಬಿಡುವುದು. ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಚುನಾವಣಾ ಘಟಕಗಳನ್ನು ಆಯಾ ಇಲಾಖೆಗಳ ನಿಯಂತ್ರಣದಲ್ಲಿ ಉಳಿಸಿ, ಪ್ರಸ್ತುತ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಮುಂದುವರೆಸಲು ಸಚಿವ ಸಂಪುಟ ನಿರ್ಣಯಿಸಿದೆ.

ಕೆ.ಜಿ.ಐ.ಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018-20 ದ್ವೈವಾರ್ಷಿಕ ಅವಧಿಗೆ ಅಧಿಲಾಭಾಂಶ (Bonus) ಘೋಷಣೆ ಮಾಡಲು ಪ್ರಸ್ತಾಪಿಸಲಾಗಿದ್ದು, ದಿನಾಂಕ: 01.04.2018 ರಿಂದ 31.03.2020ರ ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/- ರಂತೆ ಲಾಭಾಂಶ (ಬೋನಸ್) ಘೋಷಿಸಲು; ಮತ್ತು ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ: 01.04.2020 ರಿಂದ 31.03.2022 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80 ರಂತೆ ಮಧ್ಯಂತರ ಲಾಭಾಂಶವನ್ನು (ಇಂಟರೀಮ್ ಬೋನಸ್) ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿದೆ.

5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ದಿನಾಂಕ: 28.02.2025 ರವರೆಗೆ ವಿಸ್ತರಿಸುವ ಸಂಬಂಧ ಆಯೋಗದ ಅವಧಿಯನ್ನು 28ನೇ ಫೆಬ್ರವರಿ 2025 ರವರೆಗೆ ವಿಸ್ತರಿಸುವ ಬಗ್ಗೆ ಹಾಗೂ ಡಿಸೆಂಬರ್ 2024ರ ಒಳಗೆ ಆಯೋಗವು ತನ್ನ ವರದಿಯನ್ನು ಸಲ್ಲಿಸುವಂತೆ ತಿಳಿಸುವ ಬಗ್ಗೆ ಸಚಿವ ಸಂಪುಟದ ಅನುಮೋದನೆ ನೀಡಿದೆ.

ಕೋವಿಡ್-19 ಕಾರಣದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 20(1)(ಸಿ) ಅನ್ನು ಸಡಿಲಿಸಿ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಹೇರೂರು ಗ್ರಾಮದ ಸ.ನಂ. 105 ರಲ್ಲಿ 5-00 ಎಕರೆ ಜಮೀನನ್ನು ಗುಬ್ಬಿ ತಾಲ್ಲೂಕಿನಲಿ ಬಸ್ ಘಟಕ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಉಚಿತವಾಗಿ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದಿಸಿದೆ.

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ, ಬೆಂಗಳೂರು ಇವರಿಗೆ ಬೆಂಗಳೂರಿನ ಇನ್‍ಫೆಂಟ್ರಿ ರಸ್ತೆಯಲ್ಲಿ ನೀಡಿರುವ 120*150 ಅಡಿ ನಿವೇಶನದ ಗುತ್ತಿಗೆ ಅವಧಿಯನ್ನು 30 ವರ್ಷಗಳ ಗುತ್ತಿಗೆ ಅವಧಿಯನ್ನು ದಿನಾಂಕ: 30.07.2023 ರಿಂದ ಪೂರ್ವಾನ್ವಯವಾಗುವಂತೆ ಮುಂದಿನ 30 ವರ್ಷಗಳಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ರ (1)(1)(6) ರನ್ವಯ ಸದರಿ ಜಮೀನಿನ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ.2.50 ರಷ್ಟು ವಾರ್ಷಿಕ ಗುತ್ತಿಗೆ ಮೊತ್ತ ಮತ್ತು ಇನ್ನಿತರೆ ಶಾಸನಬದ್ಧ ಶುಲ್ಕವನ್ನು ವಿಧಿಸಿ, ಈ ಗುತ್ತಿಗೆ ಮೊತ್ತವನ್ನು ಎರಡು ವರ್ಷಗಳಿಗೊಮ್ಮೆ ಶೇ.10 ರಷ್ಟು ಹೆಚ್ಚಿಸುವ ಷರತ್ತಿಗೊಳಪಟ್ಟು ಮುಂದುವರೆಸಲು ಹಾಗೂ ವಾರ್ಷಿಕ ರೂ.10,000/- ಗಳಂತೆ ಗುತ್ತಿಗೆ ಬಾಡಿಗೆಯನ್ನು ಹೆಚ್ಚಿಸಲು ಸಚಿವ ಸಂಪುಟ ಒಪ್ಪಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಭವಿಸಿದ ಅಗ್ನಿ ಅವಗಡದಲ್ಲಿ ನಿಧನರಾದ ಶ್ರೀ ಸಿ.ಎಂ ಶಿವಕುಮಾರ್, ಅಧೀಕ್ಷಕ ಅಭಿಯಂತರರು ಹಾಗೂ ಪ್ರಭಾರ ಮುಖ್ಯ ಅಭಿಯಂತರರು ಇವರಿಗೆ ರೂ.50.00 ಲಕ್ಷಗಳ ಪರಿಹಾರ ಹಾಗೂ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಮತ್ತು ತೀವ್ರ ಗಾಯಗೊಂಡ ಉಳಿದವರಿಗೆ ಪರಿಹಾರ ಧನವನ್ನು ಇಲಾಖಾ ಸಚಿವರ ಅನುಮೋದನೆಯೊಂದಿಗೆ ನಿರ್ಧರಿಸಿ, ಸರ್ಕಾರಿ ಉದ್ಯೋಗವನ್ನು ನೀಡಲು ಸಚಿವ ಸಂಪುಟ ಅನುಮೋದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com