
ಬೆಂಗಳೂರು: ತಮಿಳುನಾಡಿಗೆ ಬಿಡುವಷ್ಟು ನೀರು ಕರ್ನಾಟಕದ ಜಲಾಶಯಗಳಲ್ಲಿ ಇಲ್ಲ. ಹೆಚ್ಚು ಮಳೆಗಾಗಿ ಪ್ರಾರ್ಥಿಸೋಣ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಮ್ಮಲ್ಲಿ ನೀರಿಲ್ಲ. ಮಳೆ ಇಲ್ಲ. ಮಳೆಗಾಗಿ ಪ್ರಾರ್ಥಿಸೋಣ. ನಮ್ಮಲ್ಲಿ ಕೆರೆಗಳು ತುಂಬಿಸಲು ಕೂಡ ನೀರಿಲ್ಲ. ಕಾವೇರಿ ಜಲಾನಯರ ಪ್ರದೇಶದ ಜಲಾಶಯಗಳ ಒಳಹರಿವು ಕಡಿಮೆ ಇದೆ ಎಂದು ಹೇಳಿದರು.
ದೆಹಲಿಯಲ್ಲಿ ಗುರುವಾರ CWRC ಯ 99ನೇ ಸಭೆ ನಡೆದಿದ್ದು, ಸಭೆಯಲ್ಲಿ ಜುಲೈ 12 ರಿಂದ ಜುಲೈ 31ರ ವರೆಗೆ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವನ್ನು ದಿನಕ್ಕೆ 1 ಟಿಎಂಸಿ (ಸರಾಸರಿ 11,500 ಕ್ಯುಸೆಕ್ಸ್ ಹರಿವು) ಇರುವಂತೆ ಕರ್ನಾಟಕವು ತನ್ನ ಜಲಾಶಯಗಳಿಂದ ನೀರಿನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಕಳೆದ ಜಲವರ್ಷದಲ್ಲಿ ಕರ್ನಾಟಕ ನೀರು ಸರಿಯಾಗಿ ಹರಿಸಿಲ್ಲ. ಪ್ರಸಕ್ತ ಜಲವರ್ಷದಲ್ಲಿ ಮನ್ಸೂನ್ ಸಾಮಾನ್ಯವಾಗಿದೆ. ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಹರಿಸುವಂತೆ ಶಿಫಾರಸು ಮಡಿ ಎಂದು ತಮಿಳುನಾಡು ಪರ ಅಧಿಕಾರಿಗಳು CWRC ಗೆ ಮನವಿ ಮಾಡಿದ್ದು. ಇದಕ್ಕೆ ಪ್ರತಿಯಾಗಿ ಕರ್ನಾಟಕ ಸಹ ಕಾವೇರಿಯಲ್ಲಿ ನೀರಿನ ಕೊರತೆ ಇದೆ. ಈ ಮಾನ್ಸೂನ್ ಸಾಮಾನ್ಯವಾಗಿಲ್ಲ, ಶೇ, 28 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ನೀರು ಬಿಡಲು ಆಗುವುದಿಲ್ಲ ಎಂದು ಕರ್ನಾಟಕದ ಪರ ಅಧಿಕಾರಿಗಳು ವಾದ ಮಂಡಿಸಿದ್ದಾರೆ.
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆಯು 58.668 ಟಿಎಂಸಿ ಇದ್ದು, ಮೆಟ್ಟೂರಿನಿಂದ 4.905 ಟಿಎಂಸಿ ಮತ್ತು ಭವಾನಿಯಿಂದ 0.618 ಟಿಎಂಸಿ (ಒಟ್ಟು 5.542 ಟಿಎಂಸಿ) ನೀರು ನದಿಗೆ ಬಿಡುಗಡೆ ಮಾಡಿರುವುದಲ್ಲದೆ ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ನೀರು ಇದೆ ಎಂದು ರಾಜ್ಯದ ಪರ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಎರಡೂ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ CWRC, ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.
Advertisement