
ಬೆಂಗಳೂರು: ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕದ ಆರ್'ಎನ್'ಝೆಡ್ ಅಪಾರ್ಟ್ ಮೆಂಟ್ ನಿವಾಸಿ ರಮ್ಯಾ (43) ಮತ್ತು ಆಕೆಯ ಪುತ್ರ ಭಾರ್ಗವ್ (13) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಜು.9ರ ರಾತ್ರಿ ಈ ಘಟನೆ ನಡೆದಿದ್ದು, ಜು.12ರ ಸಂಜೆ ಪುತ್ರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಾನಸಿಕ ಖಿನ್ನತೆಯಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿರುವ ಹಾಗೂ ಸುಂಕದಕಟ್ಟೆಯ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸವಾಗಿರುವ ರಮ್ಯಾ ಅವರ ಪುತ್ರಿ ಶುಕ್ರವಾರ ಮಧ್ಯಾಹ್ನ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ಮನೆಗೆ ಬಂದ ರಮ್ಯಾ ಅವರ ಪುತ್ರಿಗೆ ತಾಯಿ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಹಾಗೂ ಹಾಸಿಗೆಯ ಮೇಲೆ ಸಹೋದರನ ಶವ ಪತ್ತೆಯಾಗಿರುವುದು ಕಂಡು ಬಂದಿದೆ.
ಭಾರ್ಗವ್ ಮೊದಲು ನೇಣಿಗೆ ಶರಣಾಗಿದ್ದು, ನಂತರ ರಮ್ಯಾ ಶವವನ್ನು ಕೆಳಗಿಳಿಸಿ, ಅವರೂ ನೇಣಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಮೂರು ತಿಂಗಳ ಹಿಂದೆ ರಮ್ಯಾ ಅವರ ಪತಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಗಂಡನ ಸಾವಿನಿಂದ ರಮ್ಯಾ ತೀವ್ರ ಖಿನ್ನತೆಗೊಳಗಾಗಿದ್ದರು. ಇದಾದ ಬಳಿಕ ಪುತ್ರಿ ಕರೆ ಮಾಡಿದಾಗಲೆಲ್ಲಾ ಆತ್ಮಹತ್ಯೆ ಬಗ್ಗೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಸಾವಿಗೂ ಮುನ್ನ ರಮ್ಯಾ ಡೆತ್ ನೋಟ್ ಬರೆದಿಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement