
ರಾಜ್ಯದಲ್ಲಿನ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ C ಮತ್ತು D ವರ್ಗದ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಸೇರಿದಂತೆ ಏಳು ಮಸೂದೆಗಳನ್ನು ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯು ಒಪ್ಪಿಗೆ ಸಿಕ್ಕಿದೆ. ಕನ್ನಡಿಗರು ಉದ್ಯೋಗದಿಂದ ವಂಚಿತರಾಗುವುದನ್ನು ತಪ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಕನ್ನಡಿಗರ ಹಿತ ಕಾಪಾಡುವುದೇ ನಮ್ಮ ಆದ್ಯತೆ ಎಂದು ಹೇಳಿದ್ದರು. ಕನ್ನಡಿಗರಿಗೆ ಮೀಸಲಾತಿ ಕೊಡುವ ಪ್ರಸ್ತಾವಕ್ಕೆ ಕಿರಣ್ ಮಜುಮ್ದಾರ್, ಮೋಹನ್ ದಾಸ್ ಪೈ ಮೊದಲಾದ ಕೈಗಾರಿಕೋದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಉದ್ಯಮ ಸಂಘಟನೆಯಾದ ನಾಸ್ಕಾಮ್ ವಿರೋಧ ವ್ಯಕ್ತಪಡಿಸಿದೆ. ಈ ರೀತಿಯ ಮಸೂದೆ ಕಳವಳಕಾರಿಯಾದುದು. ಇದು ಉದ್ಯಮದ ಬೆಳವಣಿಗೆಗೆ ಧಕ್ಕೆ ತರುತ್ತದೆ. ರಾಜ್ಯಕ್ಕೆ ಇರುವ ಜಾಗತಿಕ ಬ್ರ್ಯಾಂಡಿಂಗ್ಗೂ ಧಕ್ಕೆ ಆಗುತ್ತದೆ. ಈ ಮಸೂದೆಯಲ್ಲಿರುವ ಕಾನೂನುಗಳ ಬಗ್ಗೆ ನಾಸ್ಕಾಮ್ ಸದಸ್ಯರಿಗೆ ಆತಂಕ ಇದೆ. ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ನಾಸ್ಕಾಮ್ ಹೇಳಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಪತ್ನಿ ಮಂಜುಳಾ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹೇಳಿಕೆ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ನಾಗೇಂದ್ರ ಅವರ ಬ್ಯಾಂಕ್ ಖಾತೆ ಜೊತೆ ಕುಟುಂಬಸ್ಥರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಪತ್ನಿಯ ಖಾತೆಯಿಂದ ಹೆಚ್ಚು ಹಣ ವರ್ಗಾವಣೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಇಡಿ ಅಧಿಕಾರಿಗಳು ಮಂಜುಳಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈ ಓವರ್ ಪ್ರಾಯೋಗಿಕ ಸಂಚಾರಕ್ಕೆ ಮುಕ್ತವಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಇದು ನೆರವಾಗಲಿದ್ದು, ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಗೆ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಹಸಿರು ನಿಶಾನೆ ತೋರಿದರು. ಈ ಹಿಂದೆ ದೇಶದಲ್ಲಿ ಮುಂಬೈ, ಜೈಪುರದಲ್ಲಿ ಮಾತ್ರ ಡಬಲ್ ಡೆಕ್ಕರ್ ಫ್ಲೈ ಓವರ್ ವ್ಯವಸ್ಥೆ ಇತ್ತು. ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈ ಓವರ್ 3.36 ಕಿಲೋ ಮೀಟರ್ ಉದ್ದವಿದ್ದು ರಾಗಿಗುಡ್ಡ- ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ 449 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಬೆಂಗಳೂರಿನ ಜಿಟಿ ಮಾಲ್ಗೆ 60 ವರ್ಷ ವಯಸ್ಸಿನ ಫಕೀರಪ್ಪ ಎಂಬ ರೈತರು ಧೋತಿ ಮತ್ತು ಶರ್ಟ್ ಧರಿಸಿ ತಮ್ಮ ಮಗನೊಂದಿಗೆ ಕಲ್ಕಿ ಸಿನಿಮಾ ನೋಡಲು ಬಂದಿದ್ದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಡದೆ ಉದ್ಧಟತನ ಪ್ರದರ್ಶಿಸಿದ್ದರು. ಇದಕ್ಕೆ ಬೇಸರಗೊಂಡ ನಾಗರಾಜ್ ತಮ್ಮ ಮೊಬೈಲ್ ನಲ್ಲಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ರೈತಪರ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳ ಸದಸ್ಯರ ಇಂದು ಬೆಳಗ್ಗೆ ಮಾಲ್ ನ ಮುಂದೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತ ಮಾಲ್ ಆಡಳಿತವು, ಸಂಬಂಧಪಟ್ಟ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದ್ದಲ್ಲದೆ, ರೈತ ಫಕೀರಪ್ಪನನ್ನು ಇಂದು ಮಾಲ್ ಒಳಗೆ ಕರೆದು ಕ್ಷಮೆಯಾಚಿಸಿದ್ದಲ್ಲದೆ ಸನ್ಮಾನ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬೃಹತ್ ಗುಡ್ಡ ಕುಸಿದು ಬಿದ್ದು ಸುಮಾರು 7 ಮಂದಿ ಮೃತಪಟ್ಟಿದ್ದು, ಇನ್ನಷ್ಟು ಮಂದಿ ಅವಶೇಶಗಡಳಡಿ ಸಿಲುಕಿದ್ದಾರೆ. ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗುಡ್ಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ಐದು ಲಕ್ಷ ರು ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈಮಧ್ಯೆ, ರಾಜ್ಯದ ಕರಾವಳಿ ಭಾಗದಲ್ಲಿ ವರುಣನ ಆರ್ಭಟ ನಾಳೆಯವರೆಗೂ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿದೆ.