
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರವೇಶ ದ್ವಾರದಿಂದ ಸ್ವಲ್ಪ ದೂರದಲ್ಲಿರುವ ಮಳೆನೀರು ಚರಂಡಿಗೆ ಬಿದ್ದು ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ತಡೆಗೋಡೆ ನಿರ್ಮಾಣ ಮಾಡಿದೆ.
ಜುಲೈ 5ರ ರಾತ್ರಿ ಮಳೆಯಾಗುತ್ತಿದ್ದರಿಂದ ಗೋಚರತೆ ಕಡಿಮೆಯಾಗಿ ದ್ವಿಚಕ್ರ ವಾಹನ ಸವಾರ ಹೇಮಂತ್ ಕುಮಾರ್ ಎಂಬುವವರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಜ್ಞಾನಭಾರತಿ ಜಂಕ್ಷನ್ ಬಳಿ ಎಸ್‌ಡಬ್ಲ್ಯೂಡಿಗೆ ಬಿದ್ದು ಸಾವನ್ನಪ್ಪಿದ್ದರು. 40 ಗಂಟೆಗಳ ಶೋಧ ಕಾರ್ಯಾಚರಣೆಯ ಬಳಿಕ ಯುವಕನ ಮೃತದೇಹ ಪತ್ತೆಯಾಗಿತ್ತು. ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಇದೀಗ ತಡೆಗೋಡೆ ನಿರ್ಮಾಣ ಮಾಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ, ಯುವಕನ ಸಾವು ದುರದೃಷ್ಟಕರ ಸಂಗತಿ. ರಸ್ತೆಗಳ ನಿರ್ಮಾಣ ಬಳಿಕ ತಡೆಗೋಡೆಯ ಎತ್ತರ ಕಡಿಮೆಯಾಗಿತ್ತು. ಆದರೆ, ಇದೀಗ ಸುರಕ್ಷಿತ ರೀತಿಯಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದೆ, ತಡೆಗೋಡೆ ದಾಟಿ ಯಾರೂ ಚರಂಡಿಗೆ ಬೀಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಲವರ್ಧಿತ ಜಾಲರಿ ಮತ್ತು ಕಬ್ಬಿಣದ ರಾಡ್‌ಗಳಿಂದ ಚರಂಡಿಯನ್ನು ಮುಚ್ಚುವ ಕಾಮಗಾರಿಯನ್ನು ಭಾನುವಾರ ಆರಂಭಿಸಲಾಗಿದೆ. ಮಳೆ ಬಾರದಿದ್ದರೆ ಒಂದೆರೆಡು ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ನಿತ್ಯ ಈ ರಸ್ತೆ ಬಳಸುವ ಆಟೋ ಚಾಲಕ ಪ್ರಶಾಂತ್ ಅವರು ಮಾತನಾಡಿ, ಯುವಕನೊಬ್ಬ ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಂಡ ನಂತರವೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಈಗಲಾದರೂ ಅಧಿಕಾರಿಗಳು ಕಾಮಗಾರಿ ಕೈಗೆತ್ತಿಕೊಂಡಿರುವುದು ಸಮಾಧಾನ ತಂದಿದೆ. ತಡೆಗೋಡೆಯ ಎತ್ತರ ಕಡಿಮೆ ಇರುವುದರಿಂದ ಜನರು ಸುಲಭವಾಗಿ ಚರಂಡಿಗೆ ಬೀಳುವ ಇಂತಹ ಹಲವು ಸ್ಥಳಗಳು ನಗರದಲ್ಲಿ ನಡೆದಿವೆ ಎಂದು ಹೇಳಿದ್ದಾರೆ.
Advertisement