
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದುವರೆಗೂ 8,362ಕ್ಕೂ ಅಧಿಕ ಫ್ಲೆಕ್ಸ್ ತೆರವುಗೊಳಿಸಿ 142 ಎಫ್‌ಐಆರ್ ದಾಖಲಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು, ನಗರದಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಜೂನ್ 1ರಿಂದ ಆರಂಭವಾಗಿತ್ತು. ಅನಧಿಕೃತವಾಗಿ ಅಳವಡಿಸಿದ್ದ ಜಾಹೀರಾತುಗಳು, ಶುಭಕೋರುವ ಬ್ಯಾನರ್‌ಗಳನ್ನು ತೆರವುಗೊಳಿಸಿರುವ ಬಿಬಿಎಂಪಿ ಅಧಿಕಾರಿಗಳು 267 ದೂರುಗಳನ್ನು ನೀಡಿದ್ದು, 142 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.
ಅನಧಿಕೃತ ಜಾಹೀರಾತುಗಳನ್ನು ಅಳವಡಿಸುವ ವಿಚಾರವಾಗಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ವಲಯ ಹಿರಿಯ ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿ ವರದಿ ಪಡೆಯುತ್ತಾರೆ. ಜೂನ್ 1 ರಿಂದ ಇದುವರೆಗೂ 8,362 ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ 267 ದೂರುಗಳನ್ನು ದಾಖಲಿಸಲಾಗಿದೆ. ಅದರ ಆಧಾರದಲ್ಲಿ 142 ಎಫ್‌ಐಆರ್ ದಾಖಲಾಗಿ 1 ಲಕ್ಷ 3 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ನಗರದಲ್ಲಿ ಅನಧಿಕೃತವಾಗಿ ಅಳವಡಿಸುವ ಜಾಹೀರಾತುಗಳು ಅಳಡಿಸುವುದರಿಂದ ನಾಗರಿಕರಿಗೆ ಸಾಕಷ್ಟು ಅನಾನುಕೂಲವಾಗಲಿದೆ. ಎಲ್ಲೆಂದರಲ್ಲಿ ಜಾಹೀರಾತು ಫಲಕಗಳು ಅಳವಡಿಸುವುದರಿಂದ ಪ್ರಾಣ ಹಾನಿಯಾಗುವ ಸಂಭವವೂ ಹೆಚ್ಚಿರುತ್ತದೆ. ಈ ಸಂಬಂಧ ಅನಧಿಕೃತವಾಗಿ ಜಾಹೀರಾತು ಅಳವಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
ನಗರದ ಪ್ರಮುಖ ರಸ್ತೆಗಳ ಬದಿ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳ ಫ್ಲೆಕ್ಸ್ ಗಳನ್ನು ಹೆಚ್ಚು ಅಳವಡಿಸಲಾಗುತ್ತಿದೆ. ಈ ಸಂಬಂಧ ಯಾವುದೇ ಶುಭಾಶಯಗಳ ಕುರಿತ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸದಂತೆ ನಾಗರಿಕರಿಗೆ ಸೂಚನೆ ನೀಡಲಾಗುತ್ತಿದೆ, ರಸ್ತೆ ಬದಿ, ಪಾದಚಾರಿ ಮಾರ್ಗ, ಜಂಕ್ಷನ್ ಗಳು, ಮೇಲ್ಸೇತುವೆಗಳಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಅನಧಿಕೃತ ಜಾಹೀರಾತುಗಳ ತೆರವು ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳು ಸಹ ಪಾಲಿಕೆಯ ಜತೆ ಕೈ ಜೋಡಿಸಿ ಅನಧಿಕೃತ ಜಾಹೀರಾತುಗಳ ತೆರವು ಕಾರ್ಯಾಚರಣೆಯಲ್ಲಿ ಸಹಕಾರ ನೀಡುತ್ತಿದ್ದಾರೆ. ದೂರವಾಣಿ 1533ಗೆ ಕರೆ ಮಾಡಿ ಅಥವಾ ವಾಟ್ಸ್ ಆ್ಯಪ್ ಸಂಖ್ಯೆ 9480683939 ಗೆ ಛಾಯಾಚಿತ್ರದ ಸಮೇತ ದೂರು ಸಾರ್ವಜನಿಕರು ದೂರು ನೀಡಿಬೇಕು ಎಂದು ಮನವಿ ಮಾಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ನಾಗರೀಕರು ಪಾಲಿಕೆ ಸಹಾಯವಾಣಿ ಸಂಖ್ಯೆಯಾದ 1533 ಅಥವಾ ಜಾಹೀರಾತು ವಿಭಾಗದ ವಾಟ್ಸ್ ಆ್ಯಪ್ ಸಂಖ್ಯೆೆ 9480683939 ಗೆ ಛಾಯಾಚಿತ್ರ ಅಥವಾ ವಿಡಿಯೋ ಮಾಡಿ ವಿಳಾಸ ಸಹಿತ ಕಳುಹಿಸಿದಲ್ಲಿ ಪಾಲಿಕೆ ವತಿಯಿಂದ ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
Advertisement