
ಬೆಂಗಳೂರು: ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ನೇತೃತ್ವದ ನಿಯೋಗವು ಬಿಎಸ್‌ಡಬ್ಲ್ಯುಎಂಎಲ್ ಮತ್ತು ಬಿಬಿಎಂಪಿಗೆ ಗುರುವಾರ ಭೇಟಿ ನೀಡಿತು.
ಗ್ಯಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ನೆಲ್ ಬಹದ್ದೂರ್ ಚೆಟ್ರಿ ಮತ್ತು ಉಪ ಮೇಯರ್ ಶೆರಿಂಗ್ ಪಾಲ್ಡೆನ್ ಭುಟಿಯಾ ನೇತೃತ್ವದ ನಿಯೋಗವು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಘಟಕಕ್ಕೆ ಭೇಟಿ ನೀಡಿತು.
ಈ ವೇಳೆ ಅಧಿಕಾರಿಗಳಿಂದ ಘನತ್ಯಾಜ್ಯ ನಿರ್ವಹಣೆ, ಪಾಲಿಕೆಯ ಪಾತ್ರ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಪಾತ್ರ, ತ್ಯಾಜ್ಯ ವಿಂಗಡಣೆ ಬಗ್ಗೆ ನಿಯೋಗದವರು ಮಾಹಿತಿ ಪಡೆದುಕೊಂಡರು.
ಮಿನಿ ಟ್ರಾನ್ಸ್‌ಫರ್ ಸ್ಟೇಷನ್ಸ್, ದ್ವಿತೀಯ ಟ್ರಾನ್ಸ್‌ಫರ್ ಸ್ಟೇಷನ್ಸ್, ತ್ಯಾಜ್ಯ ಸಂಸ್ಕರಣಾ ಘಟಕಗಳು, ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ನೂತನ ಘಟಕ, ಇನ್ನಿತರ ವಿಚಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.
ಮೂಲದಲ್ಲಿಯೇ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬಿಟಿಎಂ ಲೇಔಟ್ ಮತ್ತು ಕೋರಮಂಗಲದಲ್ಲಿ ನಿರ್ಮಿಸಿರುವ ಎರಡನೇ ಹಂತದ ಘನತ್ಯಾಜ್ಯ ವರ್ಗಾವಣೆ ಮತ್ತು ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ಯಾಂಗ್ಟಕ್ ಮೇಯರ್ ನೆಲ್ ಬಹದ್ದೂರ್ ಚೆಟ್ರಿ ರಾಜ್ಯದ ಮಾದರಿಯನ್ನು ಶ್ಲಾಘಿಸಿ, ಇದೇ ರೀತಿಯ ವ್ಯವಸ್ಥೆಯನ್ನು ಗ್ಯಾಂಗ್ಟಾಕ್‌ನಲ್ಲಿಯೂ ಅಳವಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.
ಬಳಿಕ ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಘನತ್ಯಾಜ್ಯ ನಿರ್ವಹಣೆ ಕಾರ್ಯನಿರ್ವಹಣೆಯ ಕುರಿತು ಚರ್ಚಿಸಿದರು.
ಗ್ಯಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಒಂದು ಲಕ್ಷ ಜನಸಂಖ್ಯೆಯಿದ್ದು, ನಿತ್ಯ 70 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ನಿಯೋಗದವರು ವಿಷಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಿಎಸ್‌ಡಬ್ಲ್ಯುಎಂಎಲ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ, ಗ್ಯಾಂಗ್ಟಕ್ ಮಹಾನಗರ ಪಾಲಿಕೆ ಆಯುಕ್ತ ಆರ್.ಬಿ. ಭಂಡಾರಿ, ನಗರಾಬಿವೃದ್ಧಿ ಇಲಾಖೆಯ ಪ್ರಧಾನ ಮುಖ್ಯ ಎಂಜಿನಿಯರ್ ಶೈಲೇಂದ್ರ ಶರ್ಮಾ ಉಪಸ್ಥಿತರಿದ್ದರು.
Advertisement