
ಬೆಂಗಳೂರು: ನಾಯಿ ಹಾಗೂ ಇತರೆ ಪ್ರಾಣಿಗಳ ಮಾಂಸವನ್ನು ಜೈಪುರದಿಂದ ರೈಲಿನಲ್ಲಿ ನಗರಕ್ಕೆ ತಂದು ಹೋಟೆಲ್‌ಗಳಿಗೆ ಪೂರೈಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಾಂಸ ಮಾದರಿಯನ್ನು ಪರೀಕ್ಷೆ ನಡೆಸಲು ಭಾರತೀಯ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮುಂದಾಗಿದೆ.
ಶುಕ್ರವಾರ ಸಂಜೆ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಜೈಪುರ– ಮೈಸೂರು ಎಕ್ಸ್‌ಪ್ರೆಸ್ ರೈಲು ಮೂಲಕ 120 ಬಾಕ್ಸ್‌ಗಳಲ್ಲಿ ಅಂದಾಜು 4,500 ಕೆ.ಜಿ ಮಾಂಸ ತರಲಾಗಿತ್ತು. ಅದರಲ್ಲಿ ಕುರಿ ಮಾಂಸದ ಜತೆಗೆ ನಾಯಿ ಮಾಂಸವನ್ನೂ ಮಿಶ್ರಣ ಮಾಡಿ ತರಲಾಗಿದೆ’ ಎಂದು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಗುಂಪೊಂದು ಪ್ರತಿಭಟನೆ ನಡೆಸಿತ್ತು.
ಈ ವೇಳೆ ಸ್ಥಳಕ್ಕೆ ಬಂದಿದ್ದ ಪೊಲೀಸರು ಪರಿಶೀಲಿಸಿ, ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳನ್ನು ಕರೆಸಿದ್ದರು. ಅವರು ಮಾಂಸದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು, ಜುಲೈ 26 ರಂದು ಮಾಧ್ಯಮಗಳಲ್ಲಿ ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ಕುರಿ ಮತ್ತು ಇತರೆ ಪ್ರಾಣಿಗಳ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಸುದ್ದಿಗಳು ಭಿತ್ತರವಾಗಿರುತ್ತದೆ. ಈ ಕುರಿತಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಅಗತ್ಯ ಕ್ರಮಗಳನ್ನು ವಹಿಸಲಾಗಿದೆ. ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ಕುರಿ ಮತ್ತು ಇತರೆ ಪ್ರಾಣಿಗಳ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಪರಿಶೀಲಿಸಲು ಪೋಲಿಸ್ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ವ್ಯಾಪ್ತಿಯ ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ಪರಿಶೀಲನೆ ಸಂಧರ್ಭದಲ್ಲಿ ರಾಜಸ್ಥಾನದಿಂದ ಬಂದ ರೈಲಿನ ಮೂಲಕ ಸ್ವೀಕೃತವಾದ ಪಾರ್ಸೆಲ್‌ಗಳನ್ನು ನಿಲ್ದಾಣದ ಹೊರ ಆವರಣದಲ್ಲಿ ಸಾಗಾಣಿಕೆ ವಾಹನದಲ್ಲಿರಿಸಿರುವುದು ಕಂಡುಬಂದಿರುತ್ತದೆ. ಒಟ್ಟು 90 ಸಂಖ್ಯೆಯ ಪಾರ್ಸೆಲ್‌ಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಪ್ರಾಣಿಯ ಮಾಂಸವಿರುವುದು ಕಂಡುಬಂದಿರುತ್ತದೆ. ಯಾವ ಪ್ರಾಣಿಯ ಮಾಂಸವೆಂದು ಖಚಿತಪಡಿಸಿಕೊಳ್ಳಲು ಮಾಂಸದ ಮಾದರಿಯನ್ನು ಸಂಗ್ರಹಿಸಿ, ಆಹಾರ ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಸಲ್ಲಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ವಿಶ್ಲೇಷಣಾ ಫಲಿತಾಂಶದ ಆಧಾರದ ಮೇಲೆ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುತ್ತದೆ. ಪಾರ್ಸೆಲ್‌ಗಳನ್ನು ಕಳುಹಿಸಿದವರ ಮತ್ತು ಸ್ವೀಕರಿಸಿದವರ ಎಫ್‌ಎಸ್‌ಎಸ್‌ಎಐ ಪರವಾನಿಗೆ ಸೇರಿಂದತೆ ವಿವರವಾದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಲೋಪದೋಷಗಳು ಕಂಡುಬಂದಲ್ಲಿ ನಿಯಾಮನುಸಾರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಅಸ್ವಸ್ಥ
ಈ ನಡುವೆ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಬಂಧನಕ್ಕೊಳಗಾದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಪೊಲೀಸರ ವಿಚಾರಣೆ ವೇಳೆ ಅಸ್ವಸ್ಥರಾಗಿ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ.
ಸಿಟಿ ರೈಲ್ವೇ ನಿಲ್ದಾಣದ ಹೊರಗೆ ಗಲಾಟೆ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದರು.
ಸರ್ಕಾರಿ ಅಧಿಕಾರಿಯೊಬ್ಬರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆದರೆ, ಶನಿವಾರ ಬೆಳಗಿನ ಜಾವ 4.45ರ ಸುಮಾರಿಗೆ ಠಾಣೆಯಲ್ಲಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಪೊಲೀಸರು ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ತಿಳಿದುಬಂದಿದೆ.
Advertisement