
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಮಾಡಿ, ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡುವ ಉದ್ದೇಶದಿಂದ ಬಿಜೆಪಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲು ಹೊರಟಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ಹಿಂದೆ ನಡೆಸಿದ ಪಾದಯಾತ್ರೆಯಲ್ಲಿ ನಿಜಾಂಶವಿತ್ತು. ರಾಜ್ಯದ ಸಂಪತ್ತು ಉಳಿಸುವ ಸದುದ್ದೇಶದಿಂದ ಪಾದಯಾತ್ರೆ ನಡೆಸಿತು. ಆದರೆ, ಈಗ ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಯಾವುದೇ ರೀತಿ ಕಾನೂನು ಬಾಹಿರವಾಗಿ ನಡೆಯದೇ ಇರುವ ಪ್ರಕರಣವನ್ನು ಜನರಿಗೆ ಪಾದಯಾತ್ರೆ ಮಾಡುವ ಮೂಲಕ ತಪ್ಪು ಮಾಹಿತಿ ಕೊಡಲು ಪ್ರಯತ್ನಿಸುತ್ತಿದ್ದಾರೆ. ಈ ಪಾದಯಾತ್ರೆ ಅನವಶ್ಯಕ ಎಂದು ಹೇಳಿದರು.
ಹಿಂದೆ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿರುವವರ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ನಿಂದ ಪಾದಯಾತ್ರೆ ನಡೆಸಲಾಯಿತು. ನಾವು ರಾಜ್ಯದ ಜನರಿಗೆ ಬಿಜೆಪಿಗರ ಪಾದಯಾತ್ರೆಯ ದುರುದ್ದೇಶ ಮತ್ತು ಹಿಂದಿನ ನಮ್ಮ ಪಾದಯಾತ್ರೆಯ ಸದುದ್ದೇಶದ ವ್ಯತ್ಯಾಸವನ್ನು ತಿಳಿಸುತ್ತೇವೆ. ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ, ಕಾನೂನುಬಾಹಿರವಾಗಿ ಯಾವುದು ನಡೆದಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುತ್ತೇವೆ ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ನಾವು ಸಮರ್ಥಿಸಿಕೊಳ್ಳುವ ಮಾತೇ ಇಲ್ಲ. ಈಗಾಗಲೇ ತಪ್ಪಿಲ್ಲದ ಕಾರಣಕ್ಕಾಗಿಯೇ ವಾಲ್ಮೀಕಿ ಹಗರಣ ಮತ್ತು ಮೂಡ ಬಗ್ಗೆ ಸರಿಯಾದ ತನಿಖೆ ನಡೆಸಲು ಸಿದ್ದರಾಮಯ್ಯ ಅವರು ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ವರದಿ ಬಂದ ನಂತರ ಜನರಿಗೆ ತಿಳಿಯುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸಚಿವರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗುತ್ತಿದೆ. ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ತಪ್ಪು ಮಾಡಿದ್ದರೆ ಸಚಿವರ ವಿರುದ್ದವೂ ಕ್ರಮ ತೆಗೆದುಕೊಳ್ಳ ಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ
ಇದೇ ವೇಳೆ ಸಚಿವರು ರಾಜಸ್ಥಾನದಿಂದ ಬೆಂಗಳೂರಿಗೆ ಬಂದ್ದಿದ್ದು ನಾಯಿ ಮಾಂಸ ಅಲ್ಲ, ಮೇಕೆಯ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ಸ್ಪಷ್ಟಪಡಿಸಿದರು.
ಲ್ಯಾಬ್‌ನಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ. ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಮಾಂಸ ಮಾರಾಟ ಮಾಡುವುದು ವೃತ್ತಿ. ಅದು ನಾಯಿ ಮಾಂಸ ಅಲ್ಲ ಮೇಕೆ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ತಿಳಿಸಿದರು.
Advertisement