
ಬೆಂಗಳೂರು: ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ್ ಹಾಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಮತ್ತು ನ್ಯಾ.ವೀರಪ್ಪ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಆಸ್ಪತ್ರೆಯ ಅವ್ಯವಸ್ಥೆಯ ಅನಾವರಣಗೊಂಡಿದೆ.
ಲೋಕಾಯುಕ್ತ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಯ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ರೋಗಿಗಳ ಸಮಸ್ಯೆಯನ್ನು ಆಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸ್ಥಿತಿಯನ್ನು 'ಶೋಚನೀಯ' ಎಂದು ಬಣ್ಣಿಸಿದ ನ್ಯಾಯಮೂರ್ತಿ ಪಾಟೀಲ್, ಸುಧಾರಣೆಗಳ ತುರ್ತು ಅಗತ್ಯವನ್ನು ಒತ್ತಿ ಹೇಳಿದರು.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರಕುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಪರಿಶೀಲನೆ ವೇಳೆ ಔಷಧ ಕೊಟ್ಟ ಬಗ್ಗೆ ರಿಜಿಸ್ಟರ್ನಲ್ಲಿ ಎಂಟ್ರಿಯಾಗಿಲ್ಲ. ಮೂವರು ಡೇಟಾ ಎಂಟ್ರಿ ಆಪರೇಟರ್ ನೇಮಕ ಮಾಡಿಕೊಂಡಿದ್ದಾರೆ. ಜೀವ ಉಳಿಸುವ ತುರ್ತು ಔಷಧಗಳಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಔಷಧ ವಿತರಿಸುವ ಗುತ್ತಿಗೆದಾರರಿಗೆ ಹಣ ಬಾಕಿ ಇರುವುದರಿಂದ ಔಷಧ ಸರಬರಾಜಿಗೆ ತಡೆಯಾಗಿದೆ ಎಂದು ಹೇಳಿದ್ದಾರೆ.
ಒಪಿಡಿಯಲ್ಲಿ ಎಲ್ಲಾ ವೈದ್ಯರು ಇರಲಿಲ್ಲ, ಕಿರಿಯ ವೈದ್ಯರಿದ್ದರು. ಈ ಸಂಬಂಧ ಕೆಲ ಸೂಪರಿಂಟೆಂಡೆಂಟ್ ಬಂದರೆ ಇನ್ನೂ ಕೆಲವರು ರಜೆಯಲ್ಲಿದ್ದಾರೆ ಅಂದಿದ್ದಾರೆ. ರೋಗಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡದಿರುವುದು ಕಂಡುಬಂದಿದೆ. ಹಲವು ನ್ಯೂನತೆಗಳು ಕಂಡು ಬಂದಿದ್ದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ರೋಗಿಯೊಬ್ಬರು ಬಿದ್ದು ಒದ್ದಾಡುತ್ತಿದ್ದರೂ ವೈದ್ಯರು ಸಿಬ್ಬಂದಿಗೆ ನೆರವಿಗೆ ಬಂದಿರಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೊ ಫೋಟೊ ಸೆರೆಹಿಡಿದಿದ್ದರು. ಈ ಘಟನೆಯನ್ನು ಪ್ರಸ್ತಾಪಿಸಿದ ಲೋಕಾಯುಕ್ತರು ವೈದ್ಯರು ಮತ್ತು ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರೋಗಿಗಳಿಗೆ ತುರ್ತು ನೆರವು ನೀಡಲು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ವಿಕ್ಟೋರಿಯಾ ಆಸ್ಪತ್ರೆಯನ್ನು ಪರಿಶೀಲಿಸಿದ ನಂತರ ಬಿಬಿಎಂಪಿ ನಡೆಸುತ್ತಿರುವ ದಾಸಪ್ಪ ಆಸ್ಪತ್ರೆಯನ್ನೂ ನ್ಯಾಯಮೂರ್ತಿ ಪಾಟೀಲ್ ಅವರು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಶಿಫಾರಸು ಮಾಡಿದ ಸುಧಾರಣೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಈ ರೀತಿಯ ತಪಾಸಣೆ ನಡೆಸುವ ಭರವಸೆ ನೀಡಿದರು.
Advertisement