
ಬೆಂಗಳೂರು: ಬಾಲಮಂದಿರದಿಂದ ತಪ್ಪಿಸಿಕೊಂಡು ಬಂದು ಮತ್ತೆ ಕಳ್ಳತನ ಮಾಡಿದ್ದ ನಾಲ್ವರು ಅಪ್ರಾಪ್ತರನ್ನು ಪೀಣ್ಯ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ಅವರ ಪೋಷಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಬಾಲಕರಿಂದ 4 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ, 2 ದ್ವಿಚಕ್ರ ವಾಹನ ಹಾಗೂ 1 ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ.
ಕೆಲ ದಿನಗಳ ಹಿಂದೆ ಕೆಂಪಯ್ಯ ಗಾರ್ಡನ್ ಬಳಿ ಮಹಿಳೆಯೊಬ್ಬರು ಬೆಳಗ್ಗೆ ಕೆಲಸಕ್ಕೆ ನಡೆದು ಹೋಗುತ್ತಿದ್ದಾಗ ದ್ವಿ-ಚಕ್ರ ವಾಹನದಲ್ಲಿ ಹಿಂಬಾಲಿಸಿದ ಬಾಲಕರು ಅಡ್ಡಗಟ್ಟಿ 30 ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದರು.
ಬಳಿಕ ಬ್ಯಾಡರಹಳ್ಳಿ ಪೊಲೀಸರು ಬಾಲಕರನ್ನು ಬಂಧಿಸಿ ಬಾಲ ನ್ಯಾಯ ಮಂಡಳಿಗೆ ಕಳುಹಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡಿದ್ದ ಬಾಲಕರು ಮರಳಿ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.
ಈ ನಡುವೆ ಪ್ರಕರಣ ಸಂಬಂಧ ಬಾಲಕರ ಪೋಷಕರಿಗೂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಮಕ್ಕಳ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ನಾಲ್ವರು ಬಾಲರ ಪೋಷಕರಿಗೆ ಬಾಲ ಅಪರಾಧ ನ್ಯಾಯಿಕ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
Advertisement