6 ತಿಂಗಳಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಂದ 32 ಲಕ್ಷ ರೂ ದಂಡ ವಸೂಲಿ: BMRCL
ಬೆಂಗಳೂರು: ಕಳೆದ ಆರು ತಿಂಗಳುಗಳಲ್ಲಿ ಬೆಂಗಳೂರು ಮೆಟ್ರೋ ಪ್ರಾಧಿಕಾರ ಪ್ರಯಾಣಿಕರಿಂದ ಸುಮಾರು 32 ಲಕ್ಷ ರೂ ದಂಡ ವಸೂಲಿ ಮಾಡಿದೆ ಎಂದು ತಿಳಿದುಬಂದಿದೆ.
ನಮ್ಮ ಮೆಟ್ರೋ ರೈಲುಗಳಲ್ಲಿನ ಪ್ರಯಾಣಿಕರ ದುರ್ವರ್ತನೆ, ಅವಧಿ ಮೀರಿ ಪ್ರಯಾಣ ಸೇರಿದಂತೆ ಕಳೆದ ಆರು ತಿಂಗಳಲ್ಲಿ 32 ಲಕ್ಷ ರೂ.ಗಳಿಗೂ ಅಧಿಕ ದಂಡ ಸ್ವೀಕರಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿ. (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ವ್ಯಾಪ್ತಿಯ 66 ನಿಲ್ದಾಣಗಳಿಂದ ಆರು ತಿಂಗಳಲ್ಲಿ 10 ಲಕ್ಷ ಪ್ರಯಾಣಿಕರಿಂದ 32 ಲಕ್ಷ ರೂ. ದಂಡ ವಸೂಲಿ ಮಾಡಿದೆ ಎಂದು ತಿಳಿದುಬಂದಿದೆ.
ಸದ್ಯ ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 7 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಪೈಕಿ ಸರಾಸರಿ 1.50 ಲಕ್ಷ ಪ್ರಯಾಣಿಕರು ನಿಲ್ದಾಣದ ಒಳಗಡೆ ಹೆಚ್ಚು ಹೊತ್ತು ಕಾಲಹರಣ ಮಾಡಿದ್ದಾರೆ ಹಾಗೂ ಹಲವು ಕಾರಣಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ದಂಡ ವಿಧಿಸಲಾಗಿದೆ.
ಯಾವುದಕ್ಕೆ ಏಷ್ಟು ದಂಡ?
ಪ್ರಯಾಣದ ಅವಧಿ ಮೀರಿದ ನಂತರ 20 ನಿಮಿಷಗಳೊಳಗೆ ನಿಲ್ದಾಣದಿಂದ ನಿರ್ಗಮಿಸಬೇಕು. ಅದಕ್ಕಿಂತ ಹೆಚ್ಚು ಅವಧಿ ಉಳಿದರೆ ಬಿಎಂಆರ್‌ಸಿಎಲ್ 50-100 ರೂ. ದಂಡ ವಿಧಿಸುತ್ತಿದೆ. ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗದಿರಲಿ ಹಾಗೂ ಸಹ ಪ್ರಯಾಣಿಕರಿಗೂ ಕಿರಿಕಿರಿಯಾಗಬಾರದು ಎಂಬ ಕಾರಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿ. ಈ ಕ್ರಮ ಕೈಗೊಂಡಿದೆ. ಅಂತೆಯೇ ಸ್ಮಾರ್ಟ್ ಕಾರ್ಡ್, ದಿನದ ಪಾಸ್ ಇದ್ದರೆ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಈ ಮೊತ್ತ ಕಡಿತವಾಗುತ್ತದೆ. ಟೋಕನ್ ಪಡೆದು ಪ್ರಯಾಣ ಮಾಡಿದ್ದಲ್ಲಿ ಕೌಂಟರ್‌ಗೆ ದಂಡ ಕಟ್ಟಬೇಕು. ಇಲ್ಲದಿದ್ದರೆ ನಿಲ್ದಾಣದಿಂದ ಹೊರ ಹೋಗಲು ಸಾಧ್ಯವಾಗುವುದಿಲ್ಲ.
ಹೀಗೆ ಒಟ್ಟು 10,76,570 ಪ್ರಯಾಣಿಕರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿ. 32,48,508 ರೂ. ದಂಡ ವಸೂಲಿ ಮಾಡಿದೆ.ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ನಿಗದಿತ ಅವಧಿ ಮೀರಿ ತಂಗುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ದಂಡ ವಿಧಿಸುತ್ತಿದೆ. ಸಂಸ್ಥೆಯ ನಿಯಮಗಳ ಪ್ರಕಾರ ಪ್ರಯಾಣಿಕರು ಟಿಕೆಟ್ ಪಡೆದ ನಂತರ ಒಂದು ನಿಲ್ದಾಣದಲ್ಲಿ 20 ನಿಮಿಷ ತಂಗುವುದಕ್ಕೆ ಮಾತ್ರ ಅವಕಾಶವಿದೆ. ಟಿಕೆಟ್ ಪಡೆದ ನಂತರ ಇತರೆ ಯಾವುದೇ ನಿಲ್ದಾಣದಿಂದ 2 ತಾಸಿನ ಒಳಗೆ ಪ್ರಯಾಣಿಕರು ನಿರ್ಗಮಿಸಬೇಕು. ಈ ಮಿತಿಗಳನ್ನು ಮೀರಿ ತಂಗಿದ್ದರೆ ಗರಿಷ್ಠ 50 ರೂಪಾಯಿ ಅಥವಾ ಗಂಟೆಗೆ 10 ರೂಪಾಯಿ ದಂಡ ವಿಧಿಸಲಾಗುತ್ತದೆ.