ಸಚಿವ ನಾಗೇಂದ್ರಗೆ ಸಿಎಂ ಸಿದ್ದು 'ರಾಜಿನಾಮೆ' ಎಚ್ಚರಿಕೆ; ವಾಲ್ಮೀಕಿ ನಿಗಮ ಹಗರಣ: ಅಧಿಕಾರಿಗಳ ಬಂಧನ; ಭವಾನಿ ರೇವಣ್ಣ ನಾಪತ್ತೆ! ಇಂದಿನ ಸುದ್ದಿ ಮುಖ್ಯಾಂಶಗಳು 01-06-2024

ಸಚಿವ ನಾಗೇಂದ್ರಗೆ ಸಿಎಂ ಸಿದ್ದು 'ರಾಜಿನಾಮೆ' ಎಚ್ಚರಿಕೆ; ವಾಲ್ಮೀಕಿ ನಿಗಮ ಹಗರಣ: ಅಧಿಕಾರಿಗಳ ಬಂಧನ; ಭವಾನಿ ರೇವಣ್ಣ ನಾಪತ್ತೆ! ಇಂದಿನ ಸುದ್ದಿ ಮುಖ್ಯಾಂಶಗಳು 01-06-2024

1. 40 ಪರ್ಸೆಂಟ್ ಕಮಿಷನ್: ಸಿಎಂ ಸಿದ್ದರಾಮಯ್ಯ,ಡಿಕೆ ಶಿವಕುಮಾರ್‌ ಜಾಮೀನು

2023ರಲ್ಲಿ ಅಂದಿನ ಬಿಜೆಪಿ ಸರ್ಕಾರ ವಿರುದ್ಧ ಶೇಕಡಾ 40% ಕಮಿಷನ್ ಮಾಡಿದ ಆರೋಪದ ಪ್ರಕರಣದ ವಿಚಾರಣೆಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಶನಿವಾರ ಕೋರ್ಟ್ ಗೆ ಹಾಜರಾಜರು. ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ACMM ಕೋರ್ಟ್ ನ ನ್ಯಾಯಾಧೀಶರಾದ ಕೆ.ಎನ್ ಶಿವಕುಮಾರ್, ಮಾನನಷ್ಟ ಮೊಕದ್ದಮೆಯಲ್ಲಿ 2ನೇ ಮತ್ತು 3ನೇ ಆರೋಪಿಗಳಾದ ಸಿಎಂ ಹಾಗು ಡಿಸಿಎಂ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದೊಂದು ಖಾಸಗಿ ದೂರು ಆಗಿದ್ದು, ಮೊದಲ ಬಾರಿ ವಿಚಾರಣೆಗೆ ಹಾಜರಾಗಿದ್ದೇವೆ. ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಜಾಮೀನು ಬಾಂಡ್ ಗೆ ಸಹಿ ಹಾಕಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

2. ಬಿಜೆಪಿಯ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ರಿಲೀಫ್

ಬಿಜೆಪಿಯ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ರಿಲೀಫ್ ಸಿಕ್ಕಿದೆ. ಪ್ರಕರಣದ 4ನೇ ಆರೋಪಿ ರಾಹುಲ್ ಗಾಂಧಿ ಶನಿವಾರ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ವಾರಂಟ್ ಜಾರಿ ಮಾಡುವಂತೆ ದೂರುದಾರರ ಪರ ವಕೀಲ ಮನವಿ ಮಾಡಿದ್ದರು. ಆದರೆ, ವಾರಂಟ್‌ ನೀಡದೆ, ಜೂನ್ 7ರಂದು ಖುದ್ದು ಹಾಜರಾಗಲು 42ನೇ ಎಸಿಎಂಎಂ ಕೋರ್ಟ್‌ ಸೂಚನೆ ನೀಡಿದೆ. ಸಿಆರ್‌ಪಿಸಿ 205 ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಲಾಗಿದ್ದು, ಜೂನ್ 7 ರಂದು ಖುದ್ದು ಹಾಜರಾಗಲು ರಾಹುಲ್‌ ಗಾಂಧಿಗೆ ಸೂಚನೆ ನೀಡಲಾಗಿದೆ. ಬಿಜೆಪಿ ಮಾನನಷ್ಟ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ಖಾಸಗಿ ದೂರು ದಾಖಲಿಸಿದ್ದರು.

3. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಇಬ್ಬರು ಅಧಿಕಾರಿಗಳ ಬಂಧನ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಪ್ರಕರಣಕ್ಕೆ ಸಂಬಂಧ ಇಬ್ಬರು ಅಧಿಕಾರಿಗಳನ್ನು ವಿಶೇಷ ತನಿಖಾ ದಳ (SIT) ಬಂಧಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ಸಚಿವ ನಾಗೇಂದ್ರ ಅವರಿಗೆ ಈ ಇಬ್ಬರು ಅಧಿಕಾರಿಗಳು ಇದೀಗ ತಲೆ ನೋವಾಗಿ ಪರಣಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ನಾಗೇಂದ್ರಗೆ 'ಎಸ್ಐಟಿ ಮುಂದೆ ನಿಮ್ಮ ಹೆಸರು ಪ್ರಸ್ತಾಪವಾದರೆ ರಾಜೀನಾಮೆ ಪಡೆಯುವುದಾಗಿ' ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ರಚಿಸಲಾಗಿದ್ದು, ತನಿಖೆ ಚುರುಕಾಗಿ ನಡೆಯುತ್ತಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

4. ಬಂಧನ ಭೀತಿ: ಭವಾನಿ ರೇವಣ್ಣ ನಾಪತ್ತೆ

ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ ಎಸ್ಐಟಿ ನೋಟಿಸ್ ನೀಡಿತ್ತು. ಹೀಗಾಗಿ ಬಂಧನ ಭೀತಿಯಲ್ಲಿದ್ದ ಭವಾನಿ ಅವರು ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಹೊಳೆನರಸೀಪುರದಲ್ಲಿರುವ ಭವಾನಿ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ, ಭವಾನಿ ರೇವಣ್ಣ ಮನೆಯಲ್ಲಿ ಇರದ ಕಾರಣ, ಎಸ್ಐಟಿ ಅಧಿಕಾರಿಗಳು ಸಂಜೆ 5ವರೆಗೆ ಕಾದು ವಾಪಸ್ಸಾಗಿದ್ದಾರೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದಿರುವ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಇಲ್ಲ, ಗೊತ್ತಿಲ್ಲ ಎಂದು ಉತ್ತರಿಸುತ್ತಿದ್ದು ಈ ಮಧ್ಯೆ ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆಯರು ಯಾರು ಎಂದು ಪ್ರಜ್ವಲ್ ರೇವಣ್ಣ ಎಸ್ಐಟಿ ಅಧಿಕಾರಿಗಳಿಗೆ ಮರು ಪ್ರಶ್ನೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

5. ಅಪಘಾತದಲ್ಲಿ ನವಯುಗ ಟೋಲ್‌ ಸಿಬ್ಬಂದಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿರುವ ನವಯುಗ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ನಾಗರಾಜ್ ಟೋಲ್‌ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಲಾರಿಯನ್ನು ತಡೆಯಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಟೋಲ್‌ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಲಾರಿಯನ್ನು ತಡೆಯಲು ನಾಗರಾಜ್ ಮುಂದಾಗಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ಚಾಲಕ, ಅಜಾಗರೂಕತೆಯಿಂದ ಕ್ಯಾಂಟರ್ ಅನ್ನು ನಾಗರಾಜ್ ಮೇಲೆ ಹತ್ತಿಸಿ ಪರಾರಿಯಾಗಿದ್ದನು. ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಸಿಕೊಂಡು, ಕ್ಯಾಂಟರ್ ವಾಹನ ಚಾಲಕನನ್ನು ಹುಬ್ಬಳಿಯಲ್ಲಿ ವಶಕ್ಕೆ‌ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com