
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಸಂಜೆ ಮತ್ತೆ ಧಾರಾಕಾರ ಮಳೆಯಾಗಿದ್ದು, ನಗರದ ಬಹುತೇಕ ರಸ್ತೆಗಳು ಜಲಾವೃತ್ತವಾಗಿದ್ದು, ಮೆಟ್ರೋ ಹಳಿ ಮೇಲೆ ಮರ ಬಿದ್ದು ಇಂದಿರಾನಗರ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ.
ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಬೆನ್ನಲ್ಲೇ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಜೂನ್ ತಿಂಗಳ ಮೊದಲ ದಿನದಿಂದಲೇ ಆರಂಭವಾದ ಮಳೆ 2ನೇ ದಿನವೂ ಮುಂದುವರೆದಿದೆ.
ಇಂದು ಕೂಡ ಮಳೆಯ ಅಬ್ಬರ ಮುಂದುವರೆದಿದ್ದು, ನಗರದ ಹಲವೆಡೆ ಗಾಳಿ ಸಹಿತ ಮಳೆ(Rain) ಶುರುವಾಗಿದೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ ಸೇರಿದಂತೆ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ತಗ್ಗು ಪ್ರದೇಶದ ರಸ್ತೆಗಳು ಜಲಾವೃತವಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್ಹಾಲ್, ಕೆ.ಆರ್.ಮಾರ್ಕೆಟ್, ಚಾಮರಾಜಪೇಟೆ, ಕಾರ್ಪೊರೇಷನ್, ಶಿವಾಜಿನಗರ, ಯಲಹಂಕ ಸುತ್ತಮುತ್ತ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತ್ತವಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಮಳೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದೆ.
Metro ಹಳಿ ಮೇಲೆ ಮರ ಬಿದ್ದು ಸಂಚಾರ ಸ್ಥಗಿತ!
ಇತ್ತ ಬಿರುಗದಾಳಿ ಸಹಿತ ಮಳೆಯಿಂದಾಗಿ ಇಂದು ನಗರದ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಟ್ರಿನಿಟಿ ನಿಲ್ದಾಣದಿಂದ ಎಂಜಿ ರಸ್ತೆ ಕಡೆ ಹೋಗುವ ಮಾರ್ಗದಲ್ಲಿ ಮರವೊಂದು ಮೆಟ್ರೋ ರೈಲು ಹಳಿ ಮೇಲೆ ಬಿದ್ದಿದೆ. ಪರಿಣಾಮ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇಂದಿರಾನಗರದಿಂದ ವೈಟ್‌ಫೀಲ್ಡ್ ಮತ್ತು ಎಂಜಿ ರಸ್ತೆಯಿಂದ ಚಲ್ಲಘಟ್ಟದ ನಡುವೆ ಮಾತ್ರ ರೈಲುಗಳು ರಾತ್ರಿ 7.26 ರಿಂದ ಕಾರ್ಯನಿರ್ವಹಿಸುತ್ತಿವೆ. ಹಳಿ ಮೇಲೆ ಬಿದ್ದಿರುವ ಮರ ಕೊಂಬೆಗಳನ್ನು ತೆರವು ಮಾಡಲಾಗುತ್ತಿದ್ದು, ತೆರವು ಕಾರ್ಯಾಚರಣೆ ವರೆಗೂ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತವಾಗಿದೆ.
ಇಂದು 34.4ಮಿ ಮೀ ಮಳೆ
ಇನ್ನು ಇಂದು ರಾತ್ರಿ 8.30ರವರೆಗೂ 34.4ಮಿ ಮೀ ಮಳೆ ಸುರಿದಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ವೆದರ್ ಕಾಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (@WeatherCastIN) ವರದಿ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಸಂಸ್ಥೆ ನಿನ್ನೆ 33.2 ಮಿ ಮೀ ಮಳೆ ಸುರಿದಿದ್ದು, ಇಂದು ಅದಕ್ಕಿಂತಲೂ ಹೆಚ್ಚು ಅಂದರೆ 34.4 ಮಿಮೀ ಮಳೆ ಸುರಿದಿದೆ ಎಂದು ಟ್ವೀಟ್ ಮಾಡಿದೆ.
5 ದಿನ ಮಳೆ ಸಾಧ್ಯತೆ
ಇನ್ನು ಮುಂಗಾರು ಪ್ರವೇಶ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಇನ್ನೂ ಐದು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ತಜ್ಞ ಸಿಎಸ್ ಪಾಟೀಲ್, ''ಜೂನ್ 1ರಿಂದ ಐದು ದಿನ ನಗರದಲ್ಲಿ ಮಳೆ ಆಗಲಿದೆ.
ಈಗಾಗಲೇ ನಿರೀಕ್ಷೆಗೂ ಮೊದಲೇ ಭಾರತದ ದಕ್ಷಿಣ ರಾಜ್ಯವಾದ ಕೇರಳವನ್ನು ನೈಋತ್ಯ ಮಾನ್ಸೂನ್ ಪ್ರವೇಶ ಮಾಡಿದ್ದು, ಇವತ್ತು ಕರ್ನಾಟಕ ಗಡಿಗೆ ನೈಋತ್ಯ ಮಾನ್ಸೂನ್ ಪ್ರವೇಶ ಮಾಡಿದೆ. ಜೊತೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಮಾನ್ಸೂನ್ ಪ್ರವೇಶವಾಗಿದೆ. ಹೀಗಾಗಿ ಇವತ್ತಿನಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಇಂದಿನಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಂದು ವಾರ ಭಾರೀ ಮಳೆ ಸಾಧ್ಯತೆ ಎಂದು ಹೇಳಿದ್ದಾರೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ, ''ನೈಋತ್ಯ ಮಾನ್ಸೂನ್ ಹಿನ್ನೆಲೆ ಇವತ್ತು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಯಚೂರು, ಕೊಪ್ಪಳ ಮಂಡ್ಯ, ಮೈಸೂರು ಸೇರಿದಂತೆ ಗುಡುಗು ಸಹಿತ ಭಾರೀ ಮಳೆ ಮೂನ್ಸುಚನೆ ನೀಡಲಾಗಿತ್ತು. 40-50 ಕಿಮೀ ವೇಗದ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ ಎಂದು ಮೊದಲೇ ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ನಗರದಲ್ಲಿ ಇನ್ನೂ 4ದಿನ ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
Advertisement