
ಬೆಂಗಳೂರು: ಯಾವುದೇ ರೀತಿಯ ಪ್ಲಾಸ್ಟಿಕ್ ಕವರ್‌ಗಳನ್ನು ಮಾರಾಟ ಮಾಡಬಾರದೆಂದು ಸರ್ಕಾರದ ಆದೇಶವಿದೆ. ಆದರೆ, ಈ ಆದೇಶವನ್ನು ಪಾಲಿಸಬೇಕಾದ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದರಿಂದ ನಗರದಲ್ಲಿ ಎಲ್ಲಿ ನೋಡಿದರೂ ತ್ಯಾಜ್ಯಯುಕ್ತ ಪ್ಲಾಸ್ಟಿಕ್ ಕವರ್‌ಗಳದ್ದೇ ಸಾಮ್ರಾಜ್ಯವಾಗಿ ಹೋಗಿದೆ.
ನಗರದ ರಸ್ತೆಗಳು ಸೇರಿದಂತೆ ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ತಂದು ಸುರಿಯುವವರ ಸಂಖ್ಯೆ ಹೆಚ್ಚಾಗಿದ್ದು, ಅನೈರ್ಮಲ್ಯ ಹೆಜ್ಜೆ ಹೆಜ್ಜೆಗೂ ಕಣ್ಣಿಗೆ ರಾಚುತ್ತಿದೆ.
ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗಿದೆ. ಆದರೂ, ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ.
ದೊಡ್ಡ ಮಾರುಕಟ್ಟೆಗಳು, ಕಿರಾಣಿ ಅಂಗಡಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕನ್ವೆನ್ಶನ್ ಹಾಲ್‌ಗಳಿಂದ ಹಿಡಿದು ಬೀದಿ ವ್ಯಾಪಾರಿಗಳವರೆಗೆ, ಏಕ ಬಳಕೆಯ ಪ್ಲಾಸ್ಟಿಕ್ ಇನ್ನೂ ಬಳಕೆಯಾಗುತ್ತಿದೆ. ಈ ಬೆಳವಣಿಗೆಗೆ ಘನತ್ಯಾಜ್ಯ ನಿರ್ವಹಣಾ ತಜ್ಞರು ಬಿಬಿಎಂಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಬಿಎಂಪಿಯ ಸ್ವಚ್ಛ ಸರ್ವೇಕ್ಷಣಾ ಸಲಹೆಗಾರ ವಿ ರಾಮಪ್ರಸಾದ್ ಮಾತನಾಡಿ, ಪ್ಲಾಸ್ಟಿಕ್ ನಿಷೇಧವನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಮೊದಲನೆಯದಾಗಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿರುವ ಬಿಬಿಎಂಪಿಯೇ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಪ್ಲಾಸ್ಟಿಕ್ ಉತ್ಪಾದಿಸುತ್ತಿರುವ ಕಂಪನಿಗಳು ತಮ್ಮ ಉತ್ಪನ್ನಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಜವಾಬ್ದಾರರಾಗಿರಬೇಕು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದಲ್ಲದೆ, ಪ್ಲಾಸ್ಟಿಕ್ ಬಳಕೆ ತಮಗೆ ಮತ್ತು ಪರಿಸರಕ್ಕೆ ಹಾನಿಕಾರಕ ಎಂಬುದನ್ನು ಜನರೂ ಕೂಡ ಅರಿತುಕೊಳ್ಳಬೇಕು. ಪರಿಸರ ಸ್ನೇಹಿ ಪರ್ಯಾಯಗಳಿಗೆ ಬದಲಾಗಬೇಕು. ಆದರೆ. ಜನರು ಇನ್ನೂ ಶಾಪಿಂಗ್ ಮಾಡುವಾಗ ಪ್ಲಾಸ್ಟಿಕ್ ಚೀಲಗಳಿಗೆ ಬೇಡಿಕೆ ಇಡುವುದನ್ನು ನಾವು ನೋಡುತ್ತಿದ್ದೇವೆ ಎಂದು ತಿಳಿಸಿದರು.
ಸ್ವಚ್ಛ ಇಕೋ ಸೊಲ್ಯೂಷನ್ಸ್ ಸಹ ಸಂಸ್ಥಾಪಕ ರಾಜೇಶ್ ಮಾತನಾಡಿ, ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ನಿಷೇಧ ಮೊದಲ ಹಂತಕ್ಕೆ ಮರಳಿದೆ. 2016 ರಲ್ಲಿ, ಬಿಬಿಎಂಪಿ ಪ್ಲಾಸ್ಟಿಕ್ ಅನ್ನು ನಿಷೇಧಿಸಿತ್ತು. ಪ್ಲಾಸ್ಟಿಕ್ ಸಂಗ್ರಹಿಸುವ ಮತ್ತು ಮಾರಾಟ ಮಾಡುವ ವ್ಯಾಪಾರಿಗಳು ಮತ್ತು ವಾಣಿಜ್ಯ ಮತ್ತು ದೇಶೀಯ ಬಳಕೆದಾರರಿಗೆ ದಂಡ ವಿಧಿಸುತ್ತಿತ್ತು. ನಿಯಮ ಜಾರಿಗೊಳಿಸಲು ಮಾರ್ಷಲ್‌ಗಳನ್ನೂ ನೇಮಿಸಿತ್ತು. ಆದಾಗ್ಯೂ, ಸಾಂಕ್ರಾಮಿಕ ರೋಗ ಸಮಯದಲ್ಲಿ ವೈರಸ್ ಹರಡುವುದನ್ನು ತಡೆಯಲು ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಬಳಕೆಗೆ ಅನುಮತಿ ನೀಡಿತ್ತು.
2022 ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಇದನ್ನು ಜಾರಿಗೊಳಿಸುವ ಮತ್ತು ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದು ಸೇರಿದಂತೆ ಕೈಗೊಂಡ ಕ್ರಮಗಳನ್ನು ಸಿಪಿಸಿಬಿ ಡ್ಯಾಶ್‌ಬೋರ್ಡ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇದರ ಜವಾಬ್ದಾರಿ ಬಿಬಿಎಂಪಿ ಮೇಲಿದೆ. ಆದರೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ಗಳು ಎಲ್ಲೆಂದರಲ್ಲಿ ಲಭ್ಯವಿದ್ದು, ಜನರೂ ಕೂಡ ನಿಷೇಧವಿಲ್ಲ ಎಂಬಂತೆ ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement