ಕಾರು ಓವರ್​​ ಟೇಕ್ ಮಾಡಿದ್ದಕ್ಕೆ ಆಂಬ್ಯುಲೆನ್ಸ್​​ ಚಾಲಕನ ಮೇಲೆ ಹಲ್ಲೆ: ಮೂವರು ಆರೋಪಿಗಳ ಬಂಧನ

ಜಾನ್ ಹಲ್ಲೆಗೊಳಗಾದ ಆ್ಯಂಬುಲೆನ್ಸ್ ಚಾಲಕ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು.

ನೆಲಮಂಗಲ: ಮಗುವಿಗೆ ತುರ್ತು ಚಿಕಿತ್ಸೆ ಕೊಡಿಸುವ ಕಾರಣಕ್ಕೆ ಕಾರನ್ನು ಓವರ್ ಟೇಕ್ ಮಾಡಿದ ಆಂಬ್ಯುಲೆನ್ಸ್ ಚಾಲಕನ ಮೇಲೆ ನಾಲ್ವರು ಆರೋಪಿಗಳು ಹಲ್ಲೆ ನಡೆಸಿರುವ ಘಟನೆಯೊಂದು ನೆಲಮಂಗಲ ಟೋಲ್ ಬಳಿ ನಡೆದಿದೆ.

ಜಾನ್ ಹಲ್ಲೆಗೊಳಗಾದ ಆ್ಯಂಬುಲೆನ್ಸ್ ಚಾಲಕ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳನ್ನು ಯಲಚೇನಹಳ್ಳಿ ನಿವಾಸಿಗಳಾದ ಮಂಜುನಾಥ್, ಲತೀಶ್ ಮತ್ತು ಯುವರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ತುಮಕೂರು ಆಸ್ಪತ್ರೆಯಿಂದ ಬೆಂಗಳೂರಿನ ವಾಣಿವಿಲಾಸ್‌ ಆಸ್ಪತೆಗೆ ಭಾನುವಾರ ಸಂಜೆ ಐದು ತಿಂಗಳ ಮಗುವನ್ನು ತುರ್ತು ಚಿಕಿತ್ಸೆಗೆ ಆಮ್ಲಜನಕದ ನೆರವಿನೊಂದಿಗೆ ಕರೆತರಲಾಗುತ್ತಿತ್ತು. ಹೆದ್ದಾರಿಯಲ್ಲಿ ಆಂಬುಲೆನ್ಸ್ ವೇಗವಾಗಿ ಬರುತ್ತಿತ್ತು. ಅದೇ ಮಾರ್ಗದಲ್ಲಿ ಕಾರು ಸಹ ಬರುತ್ತಿತ್ತು. ಮಾರ್ಗ ಮಧ್ಯದಲ್ಲಿ ಕಾರನ್ನು ಆಂಬುಲೆನ್ಸ್‌ ಹಿಂದಿಕ್ಕಿದ್ದರಿಂದ ಕುಪಿತರಾದ ಕಾರಿನಲ್ಲಿದ್ದ ಆರೋಪಿಗಳು, 5 ಕಿ.ಮೀ ದೂರದಿಂದಲೂ ಆಂಬುಲೆನ್ಸ್‌ ಅನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಬಂಧಿತ ಆರೋಪಿಗಳು.
ಬೆಂಗಳೂರು: ಆ್ಯಂಬುಲೆನ್ಸ್ ಚಾಲಕನ ಯಡವಟ್ಟು, 3 ಕಾರು ಮತ್ತು ಒಂದು ಬೈಕ್ ನಡುವೆ ಸರಣಿ ಅಪಘಾತ

ಜಾಸ್‌ಟೋಲ್‌ ಬಳಿ ಆಂಬುಲೆನ್ಸ್‌ ನಿಲ್ಲಿಸಿದ್ದರಿಂದ ಅಡ್ಡಗಟ್ಟಿ ವೇಗವಾಗಿ ಓಡಿಸುತ್ತೀಯಾ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಹಲ್ಲೆ ನಡೆಸಿ ಆಂಬುಲೆನ್ಸ್‌ ಕೀ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಬಳಿಕ ಗಲಾಟೆಯನ್ನು ತಡೆದ ಪೊಲೀಸರು ಆಂಬ್ಯುಲೆನ್ಸ್'ನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.

ತುರ್ತು ಪರಿಸ್ಥಿತಿಯ ಕಾರಣ, ಕಾರನ್ನು ಹಿಂದಿಕ್ಕಿದ್ದೆ. ಆದರೆ, ಅವರು ನನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದರು ಹಾರ್ನ್ ಮಾಡುತ್ತಲೇ ಇದ್ದರು. ಮಗುವಿಗೆ ತಕ್ಷಣ ಚಿಕಿತ್ಸೆ ಕೊಡಿಸಬೇಕಿದ್ದ ಕಾರಣ ವಾಹನ ನಿಲ್ಲಿಸಲಿಲ್ಲ. ಆದರೆ, ಟೋಲ್ ಬ್ಯಾರಿಕೇಡ್ ತೆಗೆಯ ಬೇಕಾಗ ಕಾರಣ ವಾಹನ ನಿಲ್ಲಿಸಬೇಕಾಯಿತು. ಈ ವೇಳೆ ಆರೋಪಿಗಳು ಅಡ್ಡಗಟ್ಟಿ ನನ್ನ ಮೇಲೆ ಹಲ್ಲೆ ನಡೆಸಿದರು. ನಿಂದಿಸಿದರು. ಮಗುವಿನ ತಾಯಿ ಅವರ ಬಳಿ ಬೇಡಿಕೊಳ್ಳುತ್ತಲೇ ಇದ್ದರೂ ಕೇಳಲಿಲ್ಲ. ನಂತರ, ಟೋಲ್‌ನಲ್ಲಿದ್ದ ಪೊಲೀಸ್ ಪೇದೆ ಮಧ್ಯಪ್ರವೇಶಿಸಿ, ಆಂಬ್ಯುಲೆನ್ಸ್‌ಗೆ ಹೋಗಲು ಅವಕಾಶ ಮಾಡಿಕೊಟ್ಟರು ಎಂದು ಆ್ಯಂಬುಲೆನ್ಸ್ ಚಾಲಕ ಜಾನ್ ವಿವರಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಘಟನೆಯಿಂದ ಕುಪಿತಗೊಂಡ ಕೆಲವು ಆಂಬ್ಯುಲೆನ್ಸ್ ಚಾಲಕರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಕೂಡ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿರುವ ಬಿಜೆಪಿ, ‘ಕಂಡಕಂಡಲ್ಲಿ ಪುಂಡರ ಅಟ್ಟಹಾಸ, ಸುಲಿಗೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಸ್ತೆಗಳಲ್ಲಿ ಹಗಲಲ್ಲೇ ಕುಡಿದ ಮತ್ತಿನಲ್ಲಿ ವಾಹನ ಓಡಿಸಿದರೂ ಪೊಲೀಸರು ಅಡ್ಡಗಟ್ಟುವುದಿಲ್ಲ. ಆಂಬುಲೆನ್ಸ್‌ನ್ನೇ ತಡೆಗಟ್ಟಿ ಚಾಲಕನಿಗೆ ಥಳಿಸಿ ಪುಂಡರು ಅಟ್ಟಹಾಸ ಮೆರೆಯುತ್ತಿರುವುದು ಅರಾಜಕತೆ ಹೇಗೆ ತಾಂಡವವಾಡುತ್ತಿದೆ ಎಂಬುದನ್ನು ತೋರಿಸುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿಕೆ ಕೊಡುವುದಕ್ಕೆ ಸೀಮಿತವಾಗಿದ್ದಾರೆಂದು ಕಿಡಿಕಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com