ಬಾಯ್ ಫ್ರೆಂಡ್ ಜೊತೆ ಓಡಿ ಹೋದ ತಾಯಿ: ಮೂರು ಮಕ್ಕಳು ಬೀದಿಪಾಲು!
ಬೆಳಗಾವಿ: ತಾಯಿಯೊಬ್ಬಳು ಹೆತ್ತ ಮಕ್ಕಳನ್ನು ಬಿಟ್ಟು ಯುವಕನ ಜೊತೆಗೆ ಓಡಿ ಹೋದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ಬೆಳಕಿಗೆ ಬಂದಿದೆ.
ತಾಯಿಯಿಂದಾಗಿ ಮೂರು ಮಕ್ಕಳು ಬೀದಿಗೆ ಬಂದಿದ್ದು, ನ್ಯಾಯ ಕೊಡಿಸುವಂತೆ ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ.
ಸರ್ಕಾರಿ ನೌಕರಿಯಲ್ಲಿದ್ದ ಗಂಡನ ಅಕಾಲಿಕ ನಿಧನದ ಬಳಿಕ ಮಹಿಳೆ ಅನುಕಂಪದ ನೌಕರಿ ಗಿಟ್ಟಿಸಿಕೊಂಡಿದ್ದಳು. ಗಂಡ ತೀರಿ ಹೋದ ಬಳಿಕ 3 ಮಕ್ಕಳು ತಾಯಿ ಆಶ್ರಯದಲ್ಲಿ ಬೆಳೆದರು. ಆದರೆ, ಕೆಲ ತಿಂಗಳಿಂದ ಮಕ್ಕಳನ್ನು ಬಿಟ್ಟು ಮಹಿಳೆ ಯುವಕನ ಜೊತೆಯಲ್ಲಿ ನೆಲೆಸಿದ್ದಾಳೆ.
ಏನು ತಿಳಿಯದ ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ತಾಯಿ ಬೇರೊಬ್ಬನ ಜೊತೆಗೆ ನೆಲೆಸಿರುವ ವಿಚಾರ ಗೊತ್ತಾಗಿದೆ. ಆತನ ಬಿಟ್ಟು ತಮ್ಮ ಜೊತೆಗೆ ಬರುವಂತೆ ಹಲವು ಬಾರಿ ಮಕ್ಕಳು ಮನವಿ ಮಾಡಿಕೊಂಡಿದ್ದಾರೆ. ನಿಮ್ಮೊಟ್ಟಿಗೆ ಬರಲ್ಲ ಎಂದು ತಾಯಿ ಹೇಳಿದ್ದಾಳೆಂದು ಮಕ್ಕಳು ಹೇಳಿಕೊಂಡಿದ್ದಾರೆ.
ತಾಯಿಯ ವರ್ತನೆಗೆ ಬೇಸರಗೊಂಡ 3 ಗಂಡು ಮಕ್ಕಳು ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದು, ತಾಯಿಯನ್ನ ತಮ್ಮೊಟ್ಟಿಗೆ ಕಳುಹಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅತ್ತ ಬಾಡಿಗೆ ಕಟ್ಟದ್ದಕ್ಕೆ ಮನೆ ಮಾಲೀಕರು ಮಕ್ಕಳನ್ನ ಹೊರ ಹಾಕಿದ್ದು, ಸದ್ಯ ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ.
ತಾಯಿ ವಾಪಸ್ ಬಂದರೆ ತಾವೇ ಶಾಲೆ, ಕಾಲೇಜು ಬಿಟ್ಟು ಕೆಲಸಕ್ಕೆ ಹೋಗಿ ಸಾಕುತ್ತೇವೆಂದು ಮಕ್ಕಳು ಹೇಳಿದ್ದಾರೆ. ಈ ಕುರಿತು ತಾಯಿಯನ್ನು ಪ್ರಶ್ನಿಸಿದರೆ ರೋಷಾವೇಶ ತೋರಿಸುತ್ತಿದ್ದು, ಇದು ನಮ್ಮ ವೈಯಕ್ತಿಕ ವಿಚಾರ ನೀವ್ಯಾರು ಎಂದು ಪ್ರಶ್ನಿಸಿದ್ದಾರೆ.
ಮಕ್ಕಳನ್ನು ಹೊಸ ಮನೆಗೆ ಕರೆದುಕೊಂಡು ಹೋಗಲು ಸಿದ್ಧಳಿದ್ದೇನೆ. ಆದರೆ, ಅವರು ಬರಲು ಸಿದ್ಧರಿಲ್ಲ ಎಂದು ಮಹಿಳೆ ಹೇಳಿದ್ದು, ನನ್ನ ಶೇ.75ರಷ್ಟು ವೇತನವನ್ನೂ ಮಕ್ಕಳಿಗೆ ನೀಡಲು ಸಿದ್ಧಳಿದ್ದೇನೆಂದು ತಿಳಿಸಿದ್ದಾರೆ.
ಮೂವರು ಮಕ್ಕಳ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದು, 19 ವರ್ಷದ ಯುವಕನಿದ್ದಾನೆ. ತಾಯಿಯೊಂಂದಿಗೆ ನೆಲೆಸಿರುವ ವ್ಯಕ್ತಿಗೆ ಉತ್ತಮ ನಡವಳಿಕೆಯಿಲ್ಲ. ಆತನಿಂದ ತಾಯಿಯನ್ನು ರಕ್ಷಿಸಬೇಕೆಂದು ಯುವಕ ಹೇಳಿದ್ದಾನೆ. ಈ ನಡುವೆ ಪೊಲೀಸರು ಕುಟುಂಬವನ್ನು ಒಗ್ಗೂಡಿಸಲು ಪ್ರಯತ್ನ ಮುಂದುವರೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ