
ಮಂಗಳೂರು: ಜಲಮೂಲಗಳಿಗೆ ತ್ಯಾಜ್ಯ ನೀರು ಬಿಡುಗಡೆ ಆರೋಪದ ಮೇರೆಗೆ ಪತಂಜಲಿ ಫುಡ್ ಲಿಮಿಟೆಡ್ ಸಂಸ್ಥೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದೆ.
ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪತಂಜಲಿ ಫುಡ್ ಲಿಮಿಟೆಡ್ ಸಂಸ್ಥೆ ನಿಯಮ ಉಲ್ಲಂಘಿಸಿ ಜಲಮೂಲಗಳಿಗೆ ತನ್ನ ಕಾರ್ಖಾನೆಯ ತ್ಯಾಜ್ಯವನ್ನು ಬಿಡುತ್ತಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ, 1974ರ ಅಡಿಯಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಜೂನ್ 24ರಂದು ಹೊರಡಿಸಲಾಗಿರುವ ನೋಟಿಸ್ ನಲ್ಲಿ ಪತಂಜಲಿ ತನ್ನ ದ್ರವ ತ್ಯಾಜ್ಯವನ್ನು ಜಲಮೂಲಗಳಿಗೆ ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗಿದೆ. ಮಂಗಳೂರಿನ ಕೆಎಸ್‌ಪಿಸಿಬಿ ಹಿರಿಯ ಪರಿಸರ ಅಧಿಕಾರಿ ಸಹಿ ಮಾಡಿರುವ ನೋಟಿಸ್‌ನಲ್ಲಿ, ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ 1974ರ ಜಲ ಕಾಯಿದೆಯಡಿ ನಿಮಗೆ ನೀಡಿರುವ ಒಪ್ಪಿಗೆಯನ್ನು ಮಂಡಳಿ ಏಕೆ ಹಿಂತೆಗೆದುಕೊಳ್ಳಬಾರದು.
ಅಂತೆಯೇ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲು ಮತ್ತು ಉದ್ಯಮವನ್ನು ವಶಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಬಾರದು ಎಂಬುದಕ್ಕೆ 15 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.
ಜೂನ್ 23 ರಂದು ನಡೆಸಲಾದ ತಪಾಸಣೆಯ ಸಂದರ್ಭದಲ್ಲಿ, ಮಂಡಳಿಯು ಉದ್ಯಮದ ಒಳಗಿನಿಂದ ಹೊರಭಾಗಕ್ಕೆ ಹರಿಯುವ ಮಳೆನೀರಿನ ಚರಂಡಿಯಲ್ಲಿ ಬೂದು ಬಣ್ಣದ ನೀರಿನ ಕುರುಹುಗಳನ್ನು ಗಮನಿಸಿದೆ ಎಂದು ಮೂರು ಪುಟಗಳ ಸೂಚನೆಯಲ್ಲಿ ತಿಳಿಸಲಾಗಿದೆ.
ಇಟಿಪಿ ಪ್ರದೇಶದಲ್ಲಿ ನೀರು ನಿಂತಿದ್ದು, ಕೆಸರು, ಲೋಹದ ತ್ಯಾಜ್ಯ, ಘನತ್ಯಾಜ್ಯಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಬೃಹತ್ ಪ್ರಮಾಣದಲ್ಲಿ ಉದ್ಯಮದ ಹಿತ್ತಲಿನಲ್ಲಿ ಎಸೆಯಲ್ಪಟ್ಟ ತ್ಯಾಜ್ಯವು ಕಸದ ರಾಶಿಯನ್ನೇ ಸೃಷ್ಟಿಸಿದೆ ಎಂದು ತಿಳಿದುಬಂದಿದೆ.
ಅಂತೆಯೇ ಪತಂಜಲಿ ಸಂಸ್ಥೆ ಈ ಹಿಂದೆ RO ಸ್ಥಾವರದ ಸ್ಥಾಪನೆ ಕುರಿತೂ ಲೋಪವೆಸಗಿದ್ದು, ಅಧಿಕಾರಿಗಳು ನೀಡಿದ್ದ ಸಮಯದಲ್ಲಿ ಸ್ಥಾವರ ಸ್ಥಾಪನೆಯಾಗಿಲ್ಲ ಎಂಬ ಅಂಶವನ್ನೂ ಅಧಿಕಾರಿಗಳು ಗಮನಿಸಿದ್ದಾರೆ.
ಈ ಹಿಂದೆ ಫಲ್ಗುಣಿ ನದಿ ಹಿನ್ನೀರಿಗೆ ಹೋಗುವ ಮಳೆನೀರು ಚರಂಡಿಗೆ ಕಪ್ಪು ಮಿಶ್ರಿತ ತ್ಯಾಜ್ಯವನ್ನು ಬಿಡುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ನೀಡಿದ ದೂರಿನ ಮೇರೆಗೆ ಮಾಲಿನ್ಯ ಮಂಡಳಿಯು ಜೂನ್ 19 ರಂದು ಪರಿಶೀಲನೆ ನಡೆಸಿ ಪತಂಜಲಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಕಾರ್ಖಾನೆಯೊಳಗಿನ ಒಳ ಚರಂಡಿಗಳಲ್ಲಿ ಮಳೆಯ ನೀರಿನಲ್ಲಿ ಯಾವುದೇ ತ್ಯಾಜ್ಯಗಳು ಮಿಶ್ರಣವಾಗದಂತೆ ನೋಡಿಕೊಳ್ಳಲು ಅಗತ್ಯವಿರುವಲ್ಲೆಲ್ಲಾ ಬದಲಾಯಿಸಲು ಉದ್ಯಮಕ್ಕೆ ಸೂಚಿಸಲಾಗಿದೆ. ಪ್ರತಿ ETP ಘಟಕದ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಪರಿಶೀಲಿಸುವುದು, ಬೂದಿ ಶೇಖರಣಾ ಪ್ರದೇಶ ಮತ್ತು ಕಲ್ಲಿದ್ದಲು ಶೇಖರಣಾ ಯಾರ್ಡ್‌ಗಳನ್ನು ಪರಿಶೀಲಿಸುವುದು ಮತ್ತು ತ್ಯಾಜ್ಯದ ನೀರು ಹರಿಯುವಿಕೆಯು ಮಳೆನೀರಿನ ಚರಂಡಿಯೊಂದಿಗೆ ಬೆರೆಯಬಾರದು ಮತ್ತು ಮಳೆನೀರಿನ ಒಳಚರಂಡಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದೆ.
Advertisement