
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ನಿಯಂತ್ರಣಕ್ಕೆ ಸಮಗ್ರ ಮೈಕ್ರೋಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶುಕ್ರವಾರ ಸೂಚನೆ ನೀಡಿದರು.
ನಗರದ ಪೂರ್ವ ವಲಯದ ಹೊಸ ತಿಪ್ಪಸಂದ್ರ ವಾರ್ಡ್‌ನ ಜಿ.ಎಂ.ಪಾಳ್ಯದಲ್ಲಿ ಡೆಂಗ್ಯೂ ನಿಯಂತ್ರಣದ ‘ಡ್ರೈ ಡೇ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡೆಂಗ್ಯೂ ಮತ್ತು ತಡೆಗಟ್ಟುವ ಮಾರ್ಗಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಘೀ ರೋಗ ಹರಡುತ್ತದೆ. ಆದ್ದರಿಂದ ನೀರಿನ ಸಂಪ್, ಡ್ರಮ್, ಕೊಳಾಯಿ ಬಳಿ, ಹೂವಿನ ಕುಂಡ ಸೇರಿದಂತೆ ಇನ್ನಿತರ ಕಡೆ ಪರಿಶೀಲಿಸಿ ವಾರಕ್ಕೊಮ್ಮೆ ಎಲ್ಲ ಕಡೆ ನೀರನ್ನು ಹೊರ ಹಾಕಿ ಒಣಗಿಸಿ ಮತ್ತೆ ಶುದ್ಧ ನೀರು ಸಂಗ್ರಹಿಸಿಕೊಳ್ಳಬೇಕು. ವಾರಕ್ಕಿಂತ ಹೆಚ್ಚು ದಿನಗಳು ಒಂದೇ ಕಡೆ ನೀರು ಸಂಗ್ರಹವಾಗಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ತಪ್ಪದೇ ಹಳೆ ನೀರು ತೆಗೆದು ಹೊಸ ನೀರು ತುಂಬಿಸಿಕೊಳ್ಳಲು ನಾಗರಿಕರಲ್ಲಿ ಮನವಿ ಮಾಡಿದರು.
ಡೆಂಗ್ಯೂ ಹರಡುವ ಬಗ್ಗೆ ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡುವ ವೇಳೆ ಬಿತ್ತಿಪತ್ರಗಳನ್ನು ವಿತರಿಸಿದರೆ ಲಾರ್ವಾ ಉತ್ಪತ್ತಿಯಾಗುವುದನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಜೊತೆ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರಿಸಿರುವ ಕಡೆ ಔಷಧ ಸಿಂಪಡಣೆ ಮಾಡಿ ಸೊಳ್ಳೆಗಳ ಉತ್ಪತ್ತಿ ತಾಣವನ್ನು ನಿಯಂತ್ರಿಸ ಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಡೆಂಗ್ಯೂ ತಡೆಗಟ್ಟುವ ಸಲುವಾಗಿ ವಲಯವಾರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಸಮಗ್ರ ವರದಿಯನ್ನು ಫ್ರಿಸ್ಮ್-ಹೆಚ್ ತಂತ್ರಾಂಶದಲ್ಲಿ ಆಯಾ ದಿನವೇ ನಮೂದಿಸಬೇಕು ಎಂದು ಸೂಚಿಸಿದರು.
ನಗರದಲ್ಲಿ ಡೆಂಗ್ಯೂಪ್ರಕರಣಗಳು ಹೆಚ್ಚಿರುವ ಪ್ರದೇಶದಲ್ಲಿ ಆಟೋಗಳ ಮೂಲಕ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಡೆಂಗ್ಯೂನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಪಾಲಿಕೆ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಡ್ರೈ ಡೇ ಕಾರ್ಯಾಚರಣೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಕೂಡಾ ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ಡ್ರೈ ಡೇ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಯಲಹಂಕ ವಲಯ ವಲಯ ಆಯುಕ್ತರು ಶಾಲೆಗೆ ಭೇಟಿ ನೀಡಿ, ನಿಮ್ಮ ಮನೆಯಲ್ಲಿ ವಾರಕ್ಕೊಮ್ಮೆ ನೀರು ಸ್ವಚ್ಛಮಾಡುವ, ಮನೆಗಳ ಸುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳುವ, ಅಕ್ಕ- ಪಕ್ಕದ ಮನೆಯವರಿಗೆ ಡೆಂಘೀ ಹರಡುವಿಕೆಯ ಬಗ್ಗೆ ತಿಳುವಳಿಕೆ ಮೂಡಿಸಲು ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಯಿತು.
ಏತನ್ಮಧ್ಯೆ, ಡೆಂಗ್ಯೂ ಪರಿಸ್ಥಿತಿ ನಿಭಾಯಿಸುವಲ್ಲಿ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕರ್ನಾಟಕ ಕಾರ್ಯದರ್ಶಿ ಮೋಹನ್ ದಾಸರಿ ಮತ್ತು ಮಹದೇವಪುರ ಅಧ್ಯಕ್ಷ ಅಶೋಕ್ ಮೃತ್ಯುಂಜಯ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆದ ಬೆಳವಣಿಗೆ ಕೂಡ ಶುಕ್ರವಾರ ಕಂಡು ಬಂದಿತು.
Advertisement