ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 76 ವರ್ಷಗಳ ನಂತರ ಕೊನೆಗೂ ಕಲಬುರಗಿ-ಬೆಂಗಳೂರು ಮಾರ್ಗದಲ್ಲಿ ಮೀಸಲಾದ ರೈಲು ಸೇವೆ!
ಬೆಂಗಳೂರು: ಭಾರತ ದೇಶ ಸ್ವಾತಂತ್ರ್ಯಗೊಂಡ ಬರೊಬ್ಬರಿ 76 ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಗೆ ಬೆಂಗಳೂರು ಮಾರ್ಗವಾಗಿ ಮೊಟ್ಟ ಮೊದಲ ಮೀಸಲು ರೈಲು ಸೇವೆ ಆರಂಭಿಸಲಿದ್ದು, ಏಪ್ರಿಲ್ 5 ರಿಂದ ವಾರದಲ್ಲಿ 3 ದಿನ ಸಂಚಾರ ನಡೆಸಲಿದೆ ಎಂದು ಹೇಳಲಾಗಿದೆ.
ಹೌದು.. ಕಲಬುರಗಿ ಜನತೆಯ ದಶಕಗಳ ಕನಸು ನನಸಾಗಿದ್ದು, ಇನ್ನು ಮುಂದೆ ಕಲಬುರಗಿ ಹಾಗೂ ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡಲಿದೆ. ಸದ್ಯ ವಾರದಲ್ಲೇ ಒಂದೇ ದಿನ ಈ ರೈಲು ಇರಲಿದ್ದು, ಏಪ್ರಿಲ್ 5 ರಿಂದ ಮೂರು ದಿನಗಳ ಕಾಲ ಸಂಚಾರ ಮಾಡಲಿದೆ.
ಕಲಬುರಗಿ-ಬೆಂಗಳೂರು ಮಧ್ಯೆ ನೂತನ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಇಲಾಖೆ ಇಂದು (ಮಾ.4) ಒಪ್ಪಿಗೆ ಸೂಚಿಸಿದ್ದು, ಸದ್ಯ ವಾರದಲ್ಲಿ ಒಂದು ದಿನ ಮಾತ್ರ ಈ ಮಾರ್ಗದಲ್ಲಿ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡಲಿದೆ. ಪ್ರತಿ ಶನಿವಾರ ಸಂಜೆ 5 ಗಂಟೆಗೆ ಕಲಬುರಗಿಯಿಂದ ಹೊರಟು ಮರುದಿನ ಬೆಳಗ್ಗೆ 4.15ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿ ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ತಲುಪಲಿದೆ.
ಮಾರ್ಚ್ 9ರಿಂದ ನೂತನ ರೈಲು ಸಂಚಾರ ಆರಂಭವಾಗಲಿದೆ. ಸಂಸದ ಡಾ. ಉಮೇಶ್ ಜಾಧವ್ ಕಲಬುರಗಿ ರೈಲು ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಏ.5ರಿಂದ ವಾರಕ್ಕೆ ಮೂರು ದಿನ ಸಂಚಾರ
ಈ ನೂತನ ರೈಲು ಏಪ್ರಿಲ್ 5ರಿಂದ ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಈ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಇಂದು (ಮಾರ್ಚ್ 4) ದೆಹಲಿಯಲ್ಲಿ ಮನವಿ ಸಲ್ಲಿಸಿದ್ದು, ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಏಪ್ರಿಲ್ 5ರಿಂದ ವಾರದಲ್ಲಿ ಮೂರು ದಿನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.