ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ:​ BMTC ಬಸ್ʼನಲ್ಲಿ ಶಂಕಿತನ ಚಲನವಲನದ ಮತ್ತಷ್ಟು ದೃಶ್ಯ ಸೆರೆ!

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ ಹಾಗೂ ಸಿಸಿಬಿ ಅಧಿಕಾರಿಗಳಿಗೆ ಇದೀಗ ಆತನ ಚಲನವಲನಗಳ ಸಂಬಂಧ ಮತ್ತಷ್ಟು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿವೆ.
ಸಿಸಿಟಿವಿ ದೃಶ್ಯ
ಸಿಸಿಟಿವಿ ದೃಶ್ಯ

ಬೆಂಗಳೂರು: ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ ಹಾಗೂ ಸಿಸಿಬಿ ಅಧಿಕಾರಿಗಳಿಗೆ ಇದೀಗ ಆತನ ಚಲನವಲನಗಳ ಸಂಬಂಧ ಮತ್ತಷ್ಟು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿವೆ.

ಶಂಕಿತ ವ್ಯಕ್ತಿ ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಬೆಂಗಳೂರು ನಗರದಲ್ಲಷ್ಟೇ ಅಲ್ಲದೆ, ರಾಜ್ಯ, ಹೊರರಾಜ್ಯಗಳ ವಿವಿಧ ಭಾಗಗಳಲ್ಲಿ ಸಂಚರಿಸಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಪೊಲೀಸರಿಗೆ ದಾರಿ ತಪ್ಪಿಸುವ ಸಲುವಾಗಿ ಕಸರತ್ತು ನಡೆಸಿರುವ ಸಾಧ್ಯತೆಯಿದೆ. ಇದೀಗ ತನಿಖಾಧಿಕಾರಿಗಳು ಆತ ಓಡಾಡಿರುವ ದಾರಿಯಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಬಾಂಬ್ ಇಡುವ ಸಲುವಾಗಿ ಮಾ.1ರಂದು ಕುಂದಲಹಳ್ಳಿಯ ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಗೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಶಂಕಿತ ವ್ಯಕ್ತಿಯ ದೃಶ್ಯವು ಆ ಬಸ್ಸಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಆ ಬಸ್ಸಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದನ್ನು ನೋಡಿದ ಕೂಡಲೇ ಭೀತಿಗೊಳ್ಳುವ ಆತ, ಕೂಡಲೇ ಬಸ್ಸಿನಿಂದಿಳಿದು ಬೇರೊಂದು ಬಸ್ ಹತ್ತಿದ್ದಾನೆ. ಇದೀಗ ಬಸ್ಸಿನಲ್ಲಿದ್ದ ಶಂಕಿತನ ದೃಶ್ಯಾವಳಿ ಬಹಿರಂಗವಾಗಿದೆ.

ಸಿಸಿಟಿವಿ ದೃಶ್ಯ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಕಲಾವಿದ ಬಿಡಿಸಿರುವ ರೇಖಾ ಚಿತ್ರ ಅನಧಿಕೃತ; ಪೊಲೀಸರು

ಬಳಿಕ ಕಾಡುಗೋಡಿ ಕಡೆಯಿಂದ ಬಿಎಂಟಿಸಿ ಬಸ್ಸಿನಲ್ಲಿ ಕುಂದಲಹಳ್ಳಿ ಕಾಲೋನಿಗೆ ನಿಲ್ದಾಣಕ್ಕೆ ಶಂಕಿತ ಬಂದಿಳಿದಿದ್ದಾನೆ. ಬಸ್ ನಿಲ್ದಾಣದಿಂದ ಕೂಗಳತೆ ದೂರದಲ್ಲಿದ್ದ ಕೆಫೆಗೆ ತೆರಳಿ ಆತ ಬಾಂಬ್ ಇಟ್ಟು ಪರಾರಿಯಾಗಿದ್ದಾನೆ. ಈ ವಿಧ್ವಂಸಕ ಕೃತ್ಯ ಪ್ರಕರಣದ ತನಿಖೆಗಿಳಿದ ಎನ್ಐಎ, ಸಿಸಿಬಿ ಹಾಗೂ ವೈಟ್ ಫೀಲ್ಡ್ ವಿಭಾಗದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆತನ ಚಲನವಲನದ ದೃಶ್ಯಾವಳಿಗಳು ಪತ್ತೆಯಾಗಿದ್ದವು. ಇವುಗಳ ಪರಿಶೀಲನೆ ವೇಳೆ ಆತ ಬಿಎಂಟಿಸಿ ಬಸ್ಸಿನಲ್ಲಿ ಆಗನಿಸಿರುವುದು ತಿಳಿದು ಬಂದಿತ್ತು. ಕೂಡಲೇ ಜಾಗೃತರಾದ ಪೊಲೀಸರು, ಕಾಡುಗೋಡಿ-ಕುಂದಲಹಳ್ಳಿ ಮಾರ್ಗದ ಸುಮಾರು 14ಕ್ಕೂ ಹೆಚ್ಚಿನ ಬಿಎಂಟಿಸಿ ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ತಪಾಸಣೆ ನಡಸಿದಾಗ ಆತನ ಓಡಾಟದ ದೃಶ್ಯ ಸೆರೆ ಸಿಕ್ಕಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಬಾಂಬರ್ ನ ಸ್ಪಷ್ಟ ಫೋಟೋ ಅಧಿಕಾರಿಗಳಿಗೆ ಸಿಕ್ಕಿದ್ದು, ಈತನನ್ನು ಶೀಘ್ರದಲ್ಲೇ ಬಂಧನಕ್ಕೊಳಪಡಿಸುವ ಸಾಧ್ಯತೆಗಳಿವೆ.

ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ತಂಡ ಬುಧವಾರ ಸಂಜೆ ತುಮಕೂರಿಗೆ ಭೇಟಿ ನೀಡಿ ಬಾಂಬರ್ ಬಗ್ಗೆ ಮಾಹಿತಿ ಕಲೆಹಾಕಿದೆ.

ಆರೋಪಿ ಬೆಂಗಳೂರಿನ ಗೊರಗುಂಟೆಪಾಳ್ಯದಿಂದ ತುಮಕೂರು ಮೂಲಕ ಹುಮನಾಬಾದ್‌ಗೆ ಬಸ್‌ ಹತ್ತಿರಬಹುದು ಎಂಬ ಸುಳಿವು ಆಧರಿಸಿ ಸಿಸಿಬಿ ತಂಡ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ (ಐಸಿಸಿಸಿ) ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಎಸ್ಪಿ ಅಶೋಕ್ ಕೆವಿ ಅವರೊಂದಿಗೂ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯನ್ನು ಖಚಿತಪಡಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ತುಮಕೂರು ಮತ್ತು ಬಳ್ಳಾರಿವರೆಗೆ ಬಾಂಬರ್ ಪ್ರಯಾಣಿಸಿರುವ ಬಗ್ಗೆ ಸಿಸಿಬಿಗೆ ಖಚಿತ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com