ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಾಂಬರ್ ನ ಸಿಸಿಟಿವಿ ಫೋಟೋವನ್ನ ಆಧಾರವಾಗಿಟ್ಟುಕೊಂಡು ಕಲಾವಿದರೊಬ್ಬರು ಬಿಡಿಸಿರುವ ರೇಖಾಚಿತ್ರವ ಅನಧಿಕೃತ ಎಂದು ಪೊಲೀಸರು ಹೇಳಿದ್ದಾರೆ.
ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದ ಶಂಕಿತ ವ್ಯಕ್ತಿಯ ಮಾಸ್ಕ್ ಇಲ್ಲದ ಫೋಟೋವನ್ನು ಎನ್ಐಎ ರಿಲೀಸ್ ಮಾಡಿದ್ದು, ಶಂಕಿತ ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿತ್ತು. ಅಲ್ಲದೇ ಮಾಹಿತಿದಾರರ ಗುರುತನ್ನು ಗೌಪ್ಯವಾಗಿ ಇರಿಸಲಾಗುವುದು ಎಂದೂ ಹೇಳಿತ್ತು.
ಇದರ ಬೆನ್ನಲ್ಲೇ ಹೈದರಾಬಾದ್ ಮೂಲದ ಕಲಾವಿದರೊಬ್ಬರು ಈ ಸಿಸಿಟಿವಿ ಫೋಟೋವನ್ನೇ ಆಧಾರವಾಗಿಟ್ಟುಕೊಂಡು, ಬಾಂಬರ್'ನ ರೇಖಾಚಿತ್ರವನ್ನು ಬಿಡಿಸಿ, ಈ ಚಿತ್ರಗಳು ಅಧಿಕಾರಿಗಳಿಗೆ ಸಹಾಯ ಮಾಡಬಹುದು ಎಂದು ಭಾವಿಸಿದ್ದೇನೆಂದು ಹೇಳಿ ಎನ್ಐಎ ಹಾಗೂ ಸಿಸಿಬಿಗೆ ಫೋಟೋವನ್ನು ಟ್ಯಾಗ್ ಮಾಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ರೇಖಾ ಚಿತ್ರ ಕುರಿತು ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ಇಂತಹ ರೇಖಾ ಚಿತ್ರಗಳನ್ನು ಹರಿಬಿಟ್ಟರೆ, ಈ ಫೋಟೋಗಳನ್ನು ಹಲವ ಜನರು ಹಲವು ಬಾರಿ ಹಂಚಿಕೊಳ್ಳುವುದರಿಂದ ಇದೇ ಅಧಿಕೃತ ಫೋಟೋ ಎಂದು ಭಾವಿಸುತ್ತಾರೆ. ಆದರೆ, ಇದು ಅಧಿಕೃತ ಫೋಟೋವಲ್ಲ. ಜನರು ಇದರಿಂದ ಗೊಂದಲಕ್ಕೊಳಗಾಗುತ್ತಾರೆ. ತನಿಖೆಯ ಸಮಯದಲ್ಲಿ ಯಾವುದೇ ಸುಳಿವುಗಳು ಲಭ್ಯವಾಗದಿದ್ದಾಗ ನಾವೇ ಜನರ ಬಳಿ ಫೋಟೋಗಳನ್ನು ಹಂಚಿಕೊಳ್ಳುವಂತೆ ಕೇಳುತ್ತೇವೆಂದು ಹೇಳಿದ್ದಾರೆ.
ತನಿಖೆ ವಿಳಂಬವಾದಷ್ಟು ಆರೋಪಿ ತನ್ನ ಮುಖ ಚಹರೆಯನ್ನೇ ಬದಲಾಯಿಸಿಕೊಳ್ಳುವ ಸಾಧ್ಯತೆಗಳಿವೆ. ಜನರು ಕೂಡ ಆರೋಪಿ ಗುರುತನ್ನು ಮರೆತುಹೋಗುವ ಸಾಧ್ಯತೆಗಳಿರುತ್ತೇವೆ. ಹೀಗಾಗಿ ನಾವೇ ಆರೋಪಿಯ ಅಧಿಕ-ತ ಫೋಟೋವನ್ನು ಶೀಘ್ರಗತಿಯಲ್ಲಿ ಹಂಚಿಕೊಳ್ಳುತ್ತೇವೆಂದು ತಿಳಿಸಿದ್ದಾರೆ.
ಮತ್ತೊಬ್ಬ ಹಿರಿಯ ಅಧಿಕಾರಿ ಮಾತನಾಡಿ, ಇದು ಅಧಿಕೃತವಲ್ಲ. ಇಂತಹ ರೇಖಾ ಚಿತ್ರಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ಇದು ತನಿಖೆಗೂ ಅಡ್ಡಿಯುಂಟು ಮಾಡುತ್ತದೆ ತನಿಖಾ ತಂಡಕ್ಕೆ ರೇಖಾ ಚಿತ್ರ ಅಗತ್ಯಬಿದ್ದರೆ, ನಿಯಮಗಳನ್ನು ಅನುಸರಿಸಾಗುತ್ತದೆ. ನಮ್ಮಲ್ಲಿರುವ ಸಾಫ್ಟ್ ವೇರ್ ಹಾಗೂ ತಜ್ಞರನ್ನು ಬಳಕೆ ಮಾಡಿಕೊಳ್ಳುತ್ತೇವೆ. ಇಂತಹ ರೇಖಾಚಿತ್ರಗಳು ಚಿತ್ರಕ್ಕೆ ಹೋಲುವ ಜನರಿಗೂ ಕೂಡ ಸಮಸ್ಯೆ ತಂದೊಡ್ಡಲಿದೆ. ಎನ್ಐಎ ಇನಾಮು ಘೋಷಿಸಿರುವ ಕಾರಣ ಅಮಾಯಕರು ಗುರಿಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.
Advertisement