
ಬೆಂಗಳೂರು: ನ್ಯಾಯಾಧೀಶರು, ವಿಶೇಷವಾಗಿ ಜಿಲ್ಲಾ ನ್ಯಾಯಾಧೀಶರು ಕೆಲಸ-ಜೀವನದ ಸಮತೋಲನ ನಿರ್ವಹಣೆ ಮಾಡುವುದು ಮುಖ್ಯ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಶನಿವಾರ ಹೇಳಿದರು.
ಬೆಂಗಳೂರಿನ ಜಿಕೆವಿಕೆಯಲ್ಲಿನ ಬಾಬು ರಾಜೇಂದ್ರ ಪ್ರಸಾದ್ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ 21ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಪಾರ್ಟಿ ಇನ್ ಪರ್ಸನ್ ರೂಪದಲ್ಲಿ ತಮ್ಮ ಪ್ರಕರಣಗಳಲ್ಲಿ ವಾದಿಸುವ ಕೆಲವರು ನ್ಯಾಯಾಲಯದ ಅಂಕೆಯನ್ನು ಮೀರಿ ವರ್ತಿಸುತ್ತಾರೆ. ಇದಕ್ಕೆ ಅವರನ್ನು ಟೀಕಿಸುವುದು ಉತ್ತರವಾಗಬಾರದು. ಏಕೆ ಅವರು ಹಾಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಸಹಾನುಭೂತಿಯಿಂದ ಅರಿಯಬೇಕು. ಒತ್ತಡ ನಿಭಾಯಿಸುವುದು ಮತ್ತು ಪ್ರಕರಣ ಇತ್ಯರ್ಥಪಡಿಸುವುದು ನ್ಯಾಯದಾನದ ಭಾಗ.
ಕ್ರಿಮಿನಲ್ ಪ್ರಕರಣಗಳ ನಿರ್ಧಾರದಲ್ಲಿ ಜಿಲ್ಲಾ ನ್ಯಾಯಾಲಯಗಳು ಮೊದಲ ಕೇಂದ್ರಬಿಂದುವಾಗಿವೆ. ತಂಡವಾಗಿ ಯುವ ನ್ಯಾಯಾಧೀಶರಿಗೆ ನೀವೆಲ್ಲರೂ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಈಚೆಗೆ ನನ್ನ ಕೋರ್ಟ್‌ನಲ್ಲಿನ ವಿಡಿಯೋ ಒಂದನ್ನು ತಿರುಚುವ ಮೂಲಕ ನನ್ನನ್ನು ದುರಹಂಕಾರಿ ಎಂದು ಜರಿಯಲಾಗಿದೆ” ಎಂದು ಸಿಜೆಐ ಅವರು ಆನ್‌ಲೈನ್‌ನಲ್ಲಿ ನಡೆಯುವ ಚಾರಿತ್ರ್ಯವಧೆಯ ಬಗ್ಗೆ ಗಮನಸೆಳೆದರು.
ಬೆನ್ನು ನೋವಿನ ಹಿನ್ನೆಲೆಯಲ್ಲಿ ಕುರ್ಚಿಯನ್ನು ಸರಿ ಹೊಂದಿಸಲು ಪ್ರಯತ್ನಿಸಿದ್ದ ಲೈವ್ ಸ್ಟ್ರೀಮಿಂಗ್ ವಿಡಿಯೋವನ್ನು ತಿರುಚಿ ನಾನು ವಿಚಾರಣೆ ನಡೆಯುತ್ತಿರುವಾಗ ಪೀಠ ತೊರೆದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ. ಈ ತಿರುಚಿದ ವಿಡಿಯೊ ಆನ್‌ಲೈನ್‌ನಲ್ಲಿ ಬರುತ್ತಿದ್ದಂತೆ ನನ್ನ ಮೇಲೆ ವ್ಯಾಪಕ ಟೀಕಾತ್ಮಕ ದಾಳಿ ಮಾಡಿ ಟ್ರೋಲ್ ಮಾಡಲಾಯಿತು ಎಂದರು.
ಇದೇ ವೇಳೆ ದೇಶದಲ್ಲಿಯೇ ಜಿಲ್ಲಾ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಮಹಿಳಾ ನೇಮಕಾತಿ ವಿಚಾರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುತ್ತಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ದೇಶಾದ್ಯಂತ ಜಿಲ್ಲಾ ನ್ಯಾಯಾಂಗದಲ್ಲಿ ಮಹಿಳೆಯರ ಬಲವು ಶೇ 37ರಷ್ಟಿದೆ. ಕರ್ನಾಟಕದಲ್ಲಿ ಜಿಲ್ಲಾ ನ್ಯಾಯಾಂಗದಲ್ಲಿನ ನೇಮಕಾತಿಯು ಭರವಸೆ ಮೂಡಿಸುವಂತಿದೆ. ಇಲ್ಲಿ ಒಟ್ಟಾರೆ ಕರ್ತವ್ಯನಿರತ ಸಿವಿಲ್ ನ್ಯಾಯಾಧೀಶರು 447 ಮಂದಿ ಇದ್ದು, 200 ಮಂದಿ ನ್ಯಾಯಾಧೀಶರು ಮಹಿಳೆಯರಾಗಿದ್ದಾರೆ. ಇದು ಸುಮಾರು ಶೇ. 44ರಷ್ಟಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕವು ಭಾರತದಾದ್ಯಂತ ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಜಿಲ್ಲಾ ನ್ಯಾಯಾಂಗದಲ್ಲಿನ ಸೌಲಭ್ಯ ಕುರಿತು ಮಾತನಾಡಿದ ಸಿಜೆಐ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿದ್ದರೆ ಸಾಲದು ಸ್ವಚ್ಛವಾದ ನ್ಯಾಪ್ಕಿನ್ ಒದಗಿಸುವ ಯಂತ್ರಗಳನ್ನೂ ಅಳವಡಿಸಬೇಕು… ಇದು ದೇಶಾದ್ಯಂತ ಇರುವ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಆಗಬೇಕು. ಭಾರತೀಯ ನ್ಯಾಯಾಂಗದಲ್ಲಿ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮರೆಯಬಾರದು. ವಕೀಲರು ಮತ್ತು ನ್ಯಾಯಮೂರ್ತಿಗಳಂತೆ ಅವರಿಗೂ ಈ ಸೌಲಭ್ಯ ಅಗತ್ಯವಾಗಿದೆ ಎಂದರು.
ನ್ಯಾಯಾಂಗದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ನಾವು ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಕನ್ನಡದ ಖ್ಯಾತ ಕವಿ/ಕಾದಂಬರಿಕಾರ ಡಾ. ಶಿವರಾಮ ಕಾರಂತ (ಪಕ್ಷಿ ನಂಬಿಕೆ ಇಟ್ಟಿರುವುದು ಅದರ ರೆಕ್ಕೆಯ ಮೇಲೆ ವಿನಾ ಮರದ ಕೊಂಬೆಯ ಮೇಲಲ್ಲ) ಅವರ ಮಾತುಗಳನ್ನು ನ್ಯಾಯಾಂಗ ಅಧಿಕಾರಿಗಳು ನೆನಪಿನಲ್ಲಿಡಬೇಕು. ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೇ ಕರ್ತವ್ಯ ನಿಭಾಯಿಸುವ ಪ್ರಮುಖ ಜವಾಬ್ದಾರಿಯನ್ನು ನಿಮಗೆ ನೀಡಲಾಗಿದೆ. ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಯಾವುದೇ ಭಯ ಅಥವಾ ಪಕ್ಷಪಾತ ಇಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ, ಪ್ರಕರಣ ನಿರ್ಧರಿಸುವಾಗ ಹೆದರಬೇಡಿ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿಮ್ಮ ಬೆಂಬಲಕ್ಕೆ ನಿಲ್ಲಲಿವೆ. ಆದರೆ, ನೀವು ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಎಂದು ವಿಶ್ವಾಸ ತುಂಬಿದರು.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮಾತನಾಡಿ, ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯಾಧೀಶರು ಸಂಸ್ಥೆಯ ಬೆನ್ನೆಲುಬಾಗಿದ್ದರೆ, ಜಿಲ್ಲಾ ನ್ಯಾಯಾಂಗವು ಜನರ ನಂಬಿಕೆಯ ಅಡಿಪಾಯವಾಗಿದೆ ಎಂದು ಹೇಳಿದರು.
Advertisement