
ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ 42 ವರ್ಷದ ಆಟೋ ಚಾಲಕನಿಗೆ ಡ್ರಾಗರ್ ನಿಂದ ಇರಿದು ಹತ್ಯೆ ಮಾಡಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮೃತರನ್ನು ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತಿ ಎಂದು ಗುರುತಿಸಲಾಗಿದ್ದು, ಇವರು ಆಟೋ ಚಾಲಕರಾಗಿದ್ದರು.
ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದಲ್ಲಿ ಮೂರ್ತಿ ಮತ್ತು ಸಚಿನ್ ನಡುವೆ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದ್ದು, ಆರೋಪಿ ಕಿರಣ್, ಮೂರ್ತಿ ಜೊತೆಗೆ ಹಳೆ ವೈಷಮ್ಯ ಹೊಂದಿದ್ದ ರೌಡಿ ಶೀಟರ್ ಶರಣಪ್ಪನನ್ನು ಕರೆದಿದ್ದಾನೆ. ಜಗಳವಾಡುತ್ತಿರುವಾಗ ಶರಣಪ್ಪ ಡ್ರಾಗರ್ ನಿಂದ ಮೂರ್ತಿಗೆ ಇರಿದಿದ್ದಾನೆ. ನಂತರ ಕಿರಣ್ ಮತ್ತು ಶರಣಪ್ಪ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಾರಿಹೋಕರು ಮೂರ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಮೂವರೂ ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಅವರ ಹಳೆ ವೈಷಮ್ಯವೇ ಮೂರ್ತಿಗೆ ಇರಿತಕ್ಕೆ ಕಾರಣ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
Advertisement