ಬೆಂಗಳೂರು: ಸಿಡಿಲು ಬಡಿದು ಮಹಿಳೆ, 48 ಕುರಿಗಳು ಸಾವು; ಜಿಲ್ಲಾಡಳಿತದಿಂದ 6 ಲಕ್ಷ ರೂ. ಪರಿಹಾರ ಘೋಷಣೆ!

ಸಿಡಿಲು ಬಡಿದು ಮಹಿಳೆ ಹಾಗೂ 48ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೊಸಕೋಟೆ: ಸಿಡಿಲು ಬಡಿದು ಮಹಿಳೆ ಹಾಗೂ 48ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.

ಗಣಗಲು ಗ್ರಾಮದ ರತ್ನಮ್ಮ(55) ಮೃತ ದುರ್ದೈವಿ. ರತ್ನಮ್ಮ ಅವರಿಗೆ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮರಣೋತ್ತರ ಪರೀಕ್ಷೆಗೆ ಹೊಸಕೋಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಶವ ರವಾನಿಸಲಾಗಿದೆ. ಸ್ಥಳೀಯ ಪಶುಪಾಲನ ಇಲಾಖೆ ವೈದ್ಯಾಧಿಕಾರಿಗಳು ಕುರಿಗಳ ಕಳೆಬರಹ ಪರೀಕ್ಷೆ ನಡೆಸಿದ್ದಾರೆ.

ಕುರಿಗಾಹಿ ಮಹಿಳೆ ರತ್ನಮ್ಮ ಎಂದಿನಂತೆ ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸಲು ತೆರಳಿದ್ದರು. ಮಧ್ಯಾಹ್ನದ ವೇಳೆಗೆ ದಿಢೀರ್ ಮಳೆ ಸುರಿಯಲಾರಂಭಿಸಿದ್ದರಿಂದ ಬೇವಿನ ಮರದಡಿ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ ರತ್ನಮ್ಮನ ಸುತ್ತುವರೆದಿದ್ದ ಅಷ್ಟೂ ಕುರಿಗಳು ಸಿಡಿಲಿಗೆ ಬಲಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಗ್ರಹ ಚಿತ್ರ
Bengaluru Rains: ಬೆಂದು ಬಸವಳಿದಿದ್ದ ಬೆಂಗಳೂರಿಗೆ ತಂಪೆರೆದ ಮಳೆರಾಯ; ತಾಪಮಾನ 38 ರಿಂದ 23.4 ಡಿಗ್ರಿಗೆ ಕುಸಿತ, ಮತ್ತಷ್ಟು ಮಳೆ ಸಾಧ್ಯತೆ

ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಜಗದೀಶ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ರತ್ನಮ್ಮ ಅವರ ಕುಟುಂಬಕ್ಕೆ 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಈ ಮೊತ್ತದಲ್ಲಿ 4 ಲಕ್ಷ ರೂ.ಗಳನ್ನು ಶನಿವಾರ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ಶುಕ್ರವಾರ ನಾಯಂಡಹಳ್ಳಿಯಲ್ಲಿ 29.50ಮಿಮೀ, ಆರ್‌ಆರ್‌ನಗರದಲ್ಲಿ 29ಮಿಮೀ, ಮಾರುತಿ ಮಂದಿರದಲ್ಲಿ 26.50ಮಿಮೀ, ಬಿಳೇಕಹಳ್ಳಿಯಲ್ಲಿ 24ಮಿಮೀ ಮತ್ತು ಹೊರಮಾವು 17.50ಮಿಮೀ ಮಳೆ ದಾಖಲಾಗಿದೆ.

ಏತನ್ಮಧ್ಯೆ, ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com