
ಬೆಂಗಳೂರು: ನಗರದ ಖಾಸಗಿ ಕಾಲೇಜುವೊಂದರ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು 21 ವರ್ಷದ ಯುವಕ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಬಳ್ಳಾರಿ ಮೂಲದ ಸಿ ರಾಹುಲ್ ಎಂದು ಗುರುತಿಸಲಾಗಿದೆ. ಮೂರನೇ ವರ್ಷದ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ಅವರ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಾರೆ ಎಂಬುದು ತಿಳಿದುಬಂದಿದೆ.
ತಡವಾಗಿ ಬಂದಿದ್ದರಿಂದ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ್ದರಿಂದ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಆತ ಆರನೇ ಸೆಮಿಸ್ಟರ್ ಪರೀಕ್ಷೆಯ ಮೊದಲ ಪತ್ರಿಕೆಯನ್ನು ಬರೆಯಬೇಕಿತ್ತು. ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ರಾಹುಲ್‌ಗೆ ಹೇಳಲಾಗಿತ್ತು ಎಂದು ಆರೋಪಿಸಲಾಗಿದೆ.
ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಆಗ್ನೇಯ ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಯು ತನ್ನ ತಾಯಿಯೊಂದಿಗೆ ಕ್ಯಾಂಪಸ್‌ನಿಂದ 4 ಕಿಮೀ ದೂರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಪರೀಕ್ಷೆ 8-30ಕ್ಕೆ ಆರಂಭವಾಗಲಿದ್ದ ಕಾರಣ 7.30ರ ಸುಮಾರಿಗೆ ಮನೆಯಿಂದ ಹೊರಟಿದ್ದಾಗಿ ಆತನ ತಾಯಿ ಕಾಲೇಜು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ಘಟನೆ ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ. ವಿದ್ಯಾರ್ಥಿಯು ಪರೀಕ್ಷೆಗೆ ತಡವಾಗಿ ಕಾಲೇಜಿಗೆ ಹೋಗಿರುವ ಸಾಧ್ಯತೆ ಇರಲಿಲ್ಲ. ಆತ ಅಧ್ಯಯನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಕಾಲೇಜು ಆಡಳಿತ ತಿಳಿಸಿದೆ.
Advertisement