
ಬೆಂಗಳೂರು: ವಿಪ್ರೋ ನಂತರ ಇದೀಗ ಇನ್ಫೋಸಿಸ್ ಕೂಡಾ ಸಂಸ್ಕರಿಸಿದ ತ್ಯಾಜ್ಯ ನೀರು ಬಳಕೆಗೆ ಮುಂದಾಗಿದೆ. ಟೆಕ್ ದೈತ್ಯಕ್ಕೆ ಶೀಘ್ರದಲ್ಲೇ ನಾಲ್ಕು ಲಕ್ಷ ಲೀಟರ್ ಸಂಸ್ಕರಿಸಿದ ನೀರು ಸರಬರಾಜು ಮಾಡಲಾಗುವುದು ಎಂದು ಬಿಡ್ಬ್ಲೂಎಸ್ ಎಸ್ ಬಿ ಮೂಲಗಳು ತಿಳಿಸಿವೆ. ಈ ತಿಂಗಳಿನಿಂದ ವಿಪ್ರೋಗೆ ಟ್ಯಾಂಕರ್‌ಗಳ ಮೂಲಕ ಪ್ರತಿದಿನ ಮೂರು ಲಕ್ಷ ಲೀಟರ್ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಈಗಾಗಲೇ ಅರವಿಂದ್ ಮಿಲ್ ಗೆ ದಿನಕ್ಕೆ ಎರಡು ಲಕ್ಷ ಲೀಟರ್ ಮತ್ತು ಚನ್ನಬಸಪ್ಪ ಕನ್‌ಸ್ಟ್ರಕ್ಷನ್ ಗೆ ಒಂದು ಲಕ್ಷ ಲೀಟರ್ ಪೂರೈಕೆಗೆ ಬದ್ಧರಾಗಿದ್ದು, ಇಕೋಸ್ಪೇಸ್ ಟೆಕ್ ಪಾರ್ಕ್ ಮತ್ತು IMZ ಇಕೋವರ್ಲ್ಡ್‌ನೊಂದಿಗೆ ಸಭೆ ನಡೆಸಿದ್ದೇನೆ, ಅವರೂ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಅಭಿಯಾನ ನಿಧಾನವಾಗಿ ವೇಗ ಪಡೆದುಕೊಳ್ಳುತ್ತಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ವಿ ರಾಮ್ ಪ್ರಸಾತ್ ಮನೋಹರ್ ಹೇಳಿದರು.
2030 ರ ವೇಳೆಗೆ ಬೆಂಗಳೂರಿನಲ್ಲಿ ನೀರಿನ ಬೇಡಿಕೆಯು ದಿನಕ್ಕೆ 5,340 ಮಿಲಿಯನ್ ಲೀಟರ್ ದಾಟಲಿದೆ ಎಂದು ಅಂದಾಜಿಸಲಾಗಿರುವುದರಿಂದ ತ್ಯಾಜ್ಯ ನೀರು ಮರುಬಳಕೆಯನ್ನು ಉತ್ತೇಜಿಸುವುದು ಮುಖ್ಯವಾಗಿದೆ ಎಂದು ಮನೋಹರ್ ಹೇಳಿದರು.
ಇದೀಗ ನೀರಿನ ಬೇಡಿಕೆಯು 2,100 MLD ಮೀರಿದ್ದು, ಅದರಲ್ಲಿ 1,470 MLDಯಷ್ಟನ್ನು ಜಲಮಂಡಳಿ ಕಾವೇರಿ ನದಿಯಿಂದ ಪೂರೈಸುತ್ತದೆ ಮತ್ತು ಉಳಿದಿದ್ದನ್ನು ಬೋರ್‌ವೆಲ್‌ಗಳು ಮತ್ತು ನೀರಿನ ಟ್ಯಾಂಕ್ ವಿತರಣೆಗಳ ಮೂಲಕ ಪೂರೈಸಲಾಗುತ್ತಿದೆ. ಆದರೆ ಸಂಸ್ಕರಿಸಿದ ನೀರು ಯಾವಾಗಲೂ ಲಭ್ಯವಿರುತ್ತದೆ. ಅದರ ಮರುಬಳಕೆಯನ್ನು ಉತ್ತೇಜಿಸುವುದು ಕಾವೇರಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ" ಎಂದು ಮನೋಹರ್ ಹೇಳಿದರು.
Advertisement