
ಬೆಂಗಳೂರು: ರೈತರಿಗೆ ವಿತರಿಸಲು ರಾಜ್ಯದಲ್ಲಿ ಸಾಕಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬುಧವಾರ ಹೇಳಿದ್ದಾರೆ.
ರಾಜ್ಯದ ಪರಿಸ್ಥಿತಿ ಅವಲೋಕಿಸಲು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಈ ವರ್ಷ ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಯಾವುದೇ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲು ಸೂಚಿಸಿದರು.
ಈಗಾಗಲೇ ಎಲ್ಲ ಜಿಲ್ಲೆಗಳಿಗೂ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲಾಗಿದೆ. ಅವುಗಳನ್ನು ಸಂಸ್ಥೆವಾರು ಹಂಚಿಕೆ ಮಾಡಿ ವಿತರಿಸಲಾಗುತ್ತಿದೆ. ಸಾಕ್ಕಷ್ಟು ದಾಸ್ತಾನು ಕೂಡ ಇದೆ. ರೈತರಿಗೆ ಯಾವುದೇ ಕೊರತೆಯಾಗದಂತೆ ನಿಗಾ ವಹಿಸಬೇಕು. ಮೇ ಮತ್ತು ಜೂನ್ ತಿಂಗಳಿಗೆ ಕೊರತೆ ಅಥವಾ ಹೆಚ್ಚುವರಿ ಬೇಡಿಕೆ ಇದ್ದಲ್ಲಿ ತಕ್ಷಣ ಕೃಷಿ ಆಯುಕ್ತರು ಹಾಗೂ ನಿರ್ದೇಶಕರ ಗಮನಕ್ಕೆ ತನ್ನಿ ಎಂದು ತಿಳಿಸಿದರು. ಎಲ್ಲೂ ಅನಗತ್ಯ ನೂಕು ನುಗ್ಗಲು, ಗಲಾಟೆಗಳಾಗಬಾರದು ಸುಗಮ ವಿತರಣೆಗೆ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.
ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಪ್ರಮಾಣೀಕರಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ, ವ್ಯಾಪಕ ಪ್ರಚಾರ ಮಾಡಿ ಎಂದು ಹೇಳಿದರು.
ಕಳೆದ ವರ್ಷ ಬರ ರೈತರನ್ನು ಕಾಡಿತ್ತು. ಈ ವರ್ಷ ಪೂರ್ವ ಮುಂಗಾರು ಚೆನ್ನಾಗಿದೆ. ಮುಂದೆಯೂ ಉತ್ತಮ ಮಳೆ ಮುನ್ಸೂಚನೆ ಇದೆ. ರೈತರು ಸಹಜವಾಗಿ ಉತ್ಸಾಹದಿಂದ ಬಿತ್ತನೆ ಆರಂಭಿಸಿದ್ದಾರೆ. ಹಾಗಾಗಿ ಕೃಷಿಕರಿಗೆ ಅನುಕೂಲ ಕಲ್ಪಿಸಿ ಎಂದು ನಿರ್ದೇಶನ ನೀಡಿದರು.
ರಾಜ್ಯದಲ್ಲಿ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ. ಮೇ 22ರ ವರದಿಯಂತೆ ಮುಂಗಾರು ಹಂಗಾಮಿಗೆ 5.52 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು 9.01 ಲಕ್ಷ ಕ್ವಿಂಟಾಲ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. 5492.44 ಕ್ವಿಂಟಾಲ್ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನಿದೆ. ಉಳಿದ ಬಿತ್ತನೆ ಬೀಜ ಸಂಬಂಧಿಸಿದ ಸಂಸ್ಥೆಗಳಲ್ಲಿ ಲಭ್ಯವಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
2024ರ ಮುಂಗಾರು ಹಂಗಾಮಿನಲ್ಲಿ 26.80 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿದೆ. ಸಕಾಲದಲ್ಲಿ ಪೂರೈಕೆಗೆ ವ್ಯವಸ್ಥಿತ ಕ್ರಮ ಅನುಸರಿಸಲಾಗುತ್ತಿದೆ. 17.9 5ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಈಗಾಗಲೇ ಸರಬರಾಜಾಗಿದೆ. ಈವರೆಗೆ 3.05. ಲಕ್ಷ ಮೆ.ಟನ್ ಮಾರಾಟವಾಗಿದ್ದು, 14.90 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ ಎಂದು ಅಧಿಕಾರಿಗಳು ವಿವರ ಒದಗಿಸಿದರು.
Advertisement