ಬೆಂಗಳೂರು: ಬಾಬುಸಪಾಳ್ಯ ಕಟ್ಟಡ ಕುಸಿತ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದಲ್ಲಿರುವ ಅನಧಿಕೃತ ಕಟ್ಟಡಗಳ ಕೆಡವಲು ಮುಂದಾಗಿದೆ.
ರಾಜಧಾನಿಯ ಬಹುತೇಕ ಅನಧಿಕೃತ ಕಟ್ಟಡಗಳನ್ನ ತೆರವು ಮಾಡಲು ಸಿದ್ಧತೆ ಆರಂಭಿಸಿರುವ ಬಿಬಿಎಂಪಿಯು, ನಕ್ಷೆ ಅನುಮತಿ ಪಡೆಯದೇ ತಲೆ ಎತ್ತಿರುವ ಶಂಕರಪುರದ ಜ್ಞಾನೋದಯ ಪಿಯು ಕಾಲೇಜಿನ ಕಟ್ಟಡವನ್ನು ತೆರವುಗೊಳಿಸಲು ಮುಂದಾಗಿದೆ.
ನಕ್ಷೆ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಈಗಾಗಲೇ ನೋಟಿಸ್ ನೀಡಿರುವ ಪಾಲಿಕೆ, ಇದೇ ನವೆಂಬರ್ 11ರಂದು ಕಟ್ಟಡ ತೆರವುಗೊಳಿಸಲು ಮುಂದಾಗಿದೆ.
ಶಂಕರಪುರಂನಲ್ಲಿರುವ ಶೃಂಗೇರಿ ಮಠಕ್ಕೆ ಸೇರಿದ ಆಸ್ತಿ ಸಂಖ್ಯೆ 160/24 ಬಿಬಿಎಂಪಿ ಬೈಲಾಗಳನ್ನು ಉಲ್ಲಂಘಿಸಿ ಶಾಲಾ ಮತ್ತು ಪಿಯು ಕಾಲೇಜಿಗೆ ಕಟ್ಟಡ ನಿರ್ಮಿಸಿದೆ ಎಂದು ಚಿಕ್ಕಪೇಟೆ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ (ಇಇ) ಆದೇಶದ ಮೂಲಕ ತಿಳಿಸಿದ್ದಾರೆ.
ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 248 (1), 248 (2) ಮತ್ತು 248 (3) ಅಡಿಯಲ್ಲಿ ಪಾಲಿಕೆ ಈಗಾಗಲೇ ನೋಟಿಸ್ ನೀಡಿದ್ದು, ಅನಧಿಕೃತ ಕಟ್ಟಡವನ್ನು ಸ್ವಂತವಾಗಿ ತೆಗೆದುಹಾಕುವಂತೆ ಮಠದ ಆಡಳಿತಕ್ಕೆ ಸೂಚಿಸಲಾಗಿತ್ತು. ನವೆಂಬರ್ 4ರಂದೇ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ, ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನ.11ರಂದು ಪಾಲಿಕೆ ಕಟ್ಟಡ ಕೆಡವಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಕಟ್ಟಡ ಕೆಡವರು ಮುಂದಾಗಿರುವ ಬಿಬಿಎಂಪಿ ಇದೀಗ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಾಡಲು ಹೆಚ್ಚಿನ ಭದ್ರತೆ ನಿಯೋಜಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದೆ.
ಈ ನಡುವೆ ಬಿಬಿಎಂಪಿಯ ಈ ಕ್ರಮಕ್ಕೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಚಾಮರಾಜಪೇಟೆಯ ಸುತ್ತಮುತ್ತ ನೂರಾರು ಅನಧಿಕೃತ ಕಟ್ಟಡಗಳಿವೆ. ಆದರೆ, ಅದನ್ನೆಲ್ಲ ಕೆಡವುವ ಧೈರ್ಯ ಮಾಡದ ಸರ್ಕಾರ ಹಾಗೂ ಪಾಲಿಕೆ ಮಠದ ಅಧೀನದಲ್ಲಿರುವ ಶಿಕ್ಷಣ ಕೇಂದ್ರದ ಮೇಲೆ ಕಣ್ಣಿಟ್ಟಿರುವುದು ಯಾಕೆ ಎಂದು ಕಿಡಿಕಾರಿದ್ದಾರೆ.
Advertisement