ಬೆಂಗಳೂರು: ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಸಿ. ರಸ್ತೆಯಲ್ಲಿ ನಾಲಾ ರಸ್ತೆ ಜಂಕ್ಷನ್‌ನಿಂದ ಪುರಭವನ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಬಿಬಿಎಂಪಿ ಉದ್ದೇಶಿಸಿದ್ದು, ಈ ಮಾರ್ಗದಲ್ಲಿ ಮುಂದಿನ ಮೂರು ತಿಂಗಳ ಕಾಲ ವಾಹನ ಸಂಚಾರವನ್ನು ಭಾಗಶಃ ನಿಷೇಧಿಸಲಾಗಿದೆ.
ಇಂದಿನಿಂದಲೇ ಕಾಮಗಾರಿ ಆರಂಭವಾಗುತ್ತಿದ್ದು, ಕಾಮಗಾರಿ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ನಗರ ಸಂಚಾರ ಪೊಲೀಸರು ಸಲಹೆ ಹಾಗೂ ಸೂಚನೆಗಳನ್ನು ನೀಡಿ, ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಕಾಮಗಾರಿ ಮುಕ್ತಾಯ ಆಗುವವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಇರಲಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಸಂಚಾರಿ ಪೊಲೀಸರು ಈ ರಸ್ತೆಯನ್ನು ಭಾಗಶಃ ಬಂದ್ ಮಾಡಲಿದ್ದು, ರಸ್ತೆಯ ಉಳಿದ ಭಾಗದ ಮೂಲಕ ವಾಹನಗಳು ಹಾದುಹೋಗಲು ಅನುವು ಮಾಡಿಕೊಡಲಿದ್ದಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಹೊಸೂರು ರಸ್ತೆಯಿಂದ ಜೆ.ಸಿ. ರಸ್ತೆ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು ಲಾಲ್‌ಬಾಗ್ ಮುಖ್ಯದ್ವಾರದ ಬಳಿ ಬಲಕ್ಕೆ ತಿರುವು ಪಡೆದು ಕೆ.ಎಚ್. ರಸ್ತೆ, ಶಾಂತಿನಗರ, ರಿಚ್ಮಂಡ್ ಆರ್.ಆರ್. ರಸ್ತೆಯ ಮೂಲಕ ಹಡ್ಸನ್ ವೃತ್ತ ತಲುಪಬಹುದಾಗಿದೆ.
ಸೌತ್ ಎಂಡ್ ವೃತ್ತದಿಂದ ಜೆ.ಸಿ. ರಸ್ತೆಯ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು, ಮಿನರ್ವ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ಲಾಲ್‌ಬಾಗ್ ಪೋರ್ಟ್ ರಸ್ತೆ ಹಾಗೂ ಕೆ.ಆರ್. ರಸ್ತೆಯ ಮೂಲಕ ಕೆ.ಆರ್. ಮಾರುಕಟ್ಟೆ ತಲುಪಿ ಎಸ್.ಜೆ.ಪಿ. ರಸ್ತೆ, ಪುರಭವನ ಸಂಪರ್ಕ ಪಡೆಯಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮೂರು ತಿಂಗಳ ಕಾಲ ವಾಹನ ಸಂಚಾರವನ್ನು ಭಾಗಶಃ ನಿಷೇಧಿಸಲಾಗಿದೆ. ಕಾಮಗಾರಿ ವಿಳಂಬವಾದರೆ, ಈ ಅವಧಿಯನ್ನು ವಿಸ್ತರಣೆ ಮಾಡಬಹುದು. ರಸ್ತೆಯ ಮೊದಲಾರ್ಧದಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ, ಉಳಿದ ಅರ್ಧಭಾಗದ ರಸ್ತೆಯಲ್ಲಿ ಕೆಲಸ ಪ್ರಾರಂಭವಾಗುತ್ತದೆ. ವಾಹನ ಸವಾರರು ಆದಷ್ಟು ಈ ರಸ್ತೆಯಲ್ಲಿ ಸಂಚಾರ ತಪ್ಪಿಸಿ, ಬದಲಿ ಮಾರ್ಗಗಳ ಬಳಸಬೇಕೆಂದು ಮನವಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement