ಬೆಂಗಳೂರು: ಪ್ರವಾಸಕ್ಕೆಂದು ಬೆಂಗಳೂರು ನಗರಕ್ಕೆ ಬಂದಿದ್ದ ಮಾಲ್ಡೀವ್ಸ್ ಪ್ರಜೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆರ್'ಟಿ.ನಗರ ಪೊಲೀಸ್ ಠಾಮಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಾಲ್ಡೀವ್ಸ್ ಪ್ರಜೆ ಹಸನ್ ಸುಹೇಲ್ (43) ಎಂದು ಗುರುತಿಸಲಾಗಿದೆ. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ಅಸ್ವಾಭಾವಿಕ ಸಾವಿನ ವರದಿ (ಯುಡಿಆರ್) ದಾಖಲಿಸಿಕೊಂಡಿದ್ದಾರೆ.
ನ,10ರಂದು ನಗರಕ್ಕೆ ಬಂದಿದ್ದ ಹಸನ್, ಬಳ್ಳಾರಿ ರಸ್ತೆಯ ಕನಕ ಕೃಷ್ಣ ಕಂಫರ್ಟ್ಸ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಪೂರ್ವ ನಿಗದಿತ ಕಾರ್ಯಕ್ರಮದಂತೆ ಮರುದಿನ ಮಧ್ಯಪ್ರದೇಶದ ಭೂಪಾಲ್ ನಗರಕ್ಕೆ ತೆರಳಬೇಕಿತ್ತು. ಆದರೆ, ತಮ್ಮ ಪ್ರಯಾಣವನ್ನು ರದ್ದುಗೊಳಿಸಿ ಹೋಟೆಲ್ ನಲ್ಲೇ ಉಳಿದಿದ್ದರು. ಇದಾದ ಬಳಿಕ 2 ದಿನಗಳು ಕೋಣೆಯಿಂದ ಹೊರಗೆ ಬಂದಿಲ್ಲ.
ಬುಧವಾರ ಬೆಳಿಕ್ಕೆ ಕೊಠಡಿ ಸ್ವಚ್ಛಗೊಳಿಸಲು ಹೋಟೆಲ್ ಸಿಬ್ಬಂದಿ ಬಾಗಿಲು ತಟ್ಟಿದ್ದು. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಬಾಗಿಲು ಒಡೆದು ರೂಮಿನ ಒಳಗೆ ಪ್ರವೇಶಿದ್ದು, ಈ ವೇಳೆ ಸುಹೇಲ್ ಹಾಸಿಗೆ ಮೇಲೆ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಸುಹೇಲ್ ಅವರ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಸಾವಿಗೂ ಮುನ್ನ ಸುಹೇಲ್ ವಾಂತಿ ಮಾಡಿಕೊಂಡಿರುವುದು ಕಂಡು ಬಂದಿದ್ದು, ಆರೋಗ್ಯ ಸಮಸ್ಯೆ, ನಿರ್ಜಲೀಕರಣ ಅಥವಾ ಹೃದಯಾಘಾತದಿಂದ ಸುಹೇಲ್ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಬಳಿಕ ಸಾವಿಗೆ ನಿಖರ ಕಾರಣಗಳು ತಿಳಿದುಬರಲಿದೆ.
ಈ ನಡುವೆ ಪೊಲೀಸರು ಸುಹೇಲ್ ಸಾವಿನ ಬಗ್ಗೆ ಮಾಲ್ಡೀವ್ಸ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
Advertisement